ಸಂವಿಧಾನದ ಹತ್ಯೆ ಮಾಡಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್ : ನಿತಿನ್ ಗಡ್ಕರಿ

Sampriya

ಗುರುವಾರ, 4 ಜುಲೈ 2024 (20:42 IST)
Photo Courtesy X
ಬೆಂಗಳೂರು: ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಚುನಾವಣೆ ವೇಳೆ ಸುಳ್ಳು ಪ್ರಚಾರ ಮಾಡಲಾಗಿತ್ತು. ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಿಸಿದ, ಸಂವಿಧಾನದ ಹತ್ಯೆ ಮಾಡಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದರು.

ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಸುಳ್ಳು ಮಾಹಿತಿ ಕೊಡಲಾಗಿತ್ತು ಎಂದು ಆಕ್ಷೇಪಿಸಿದರು.

ಅರಮನೆ ಮೈದಾನದ ಗೇಟ್ ನಂ.3, ವೈಟ್ ಪೆಟಲ್ಸ್‍ನಲ್ಲಿ ಇಂದು ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದರು. ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು ಎಂದು ಟೀಕಿಸಿದರು.


1975ರಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳು, ಮೀಸಾದಡಿ ನಮ್ಮ ನೇತಾರರು, ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಎಂದು ನೆನಪಿಸಿದರು. ಇದು ಪ್ರಜಾಸತ್ತೆ ಮತ್ತು ಸಂವಿಧಾನದ ಹತ್ಯೆ ಎಂದು ತಿಳಿಸಿದರು.

ಬೆಂಗಳೂರಿನ ಜೈಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ ಮೊದಲಾದವರು ಇದ್ದರು ಎಂದು ವಿವರಿಸಿದರು. ತುರ್ತು ಪರಿಸ್ಥಿತಿಯ ವಿರುದ್ಧ ಭಾರತೀಯ ಜನಸಂಘ ಹೋರಾಡಿ ಪ್ರಜಾಸತ್ತೆಯನ್ನು ಉಳಿಸುವ ಕೆಲಸ ಮಾಡಿದೆ ಎಂದು ಮಾಹಿತಿ ನೀಡಿದರು. ಸಂವಿಧಾನವನ್ನು ಉಳಿಸುವ ಕೆಲಸವೂ ಆಗಿತ್ತು ಎಂದರು.

 ಪ್ರಜಾತಂತ್ರವು 4 ಸ್ಥಂಭಗಳ ಮೇಲೆ ನಿಂತಿದೆ. ಇವೆಲ್ಲವುಗಳ ಬಗ್ಗೆ ಸಂವಿಧಾನದಲ್ಲಿ ಬರೆಯಲಾಗಿದೆ. ಸಂವಿಧಾನವನ್ನು ಕಡೆಗಣಿಸಿ ಹಲವಾರು ತಿದ್ದುಪಡಿ ಮಾಡಲಾಗಿತ್ತು ಎಂದು ತಿಳಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಲಾಗಿತ್ತು ಎಂದು ಹೇಳಿದರು.

ಇಂದಿನ ಯುವಜನರಿಗೆ ತುರ್ತು ಪರಿಸ್ಥಿತಿಯ ಕುರಿತು ಮಾಹಿತಿ ಇಲ್ಲ. ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡುತ್ತಿದ್ದೆ. ಇದರಿಂದ ಕಡಿಮೆ ಅಂಕ ಬಂತು. ಆದ್ದರಿಂದ ನನಗೆ ಎಂಜಿನಿಯರಿಂಗ್ ಕೋರ್ಸ್ ಮಾಡಲಾಗಲಿಲ್ಲ. ಆಗ ನನ್ನ ಕುಟುಂಬದವರು ಆ ಕುರಿತು ಕೋಪಗೊಂಡಿದ್ದರು. ಆದರೆ, ಇದೀಗ ನನಗೆ ಪುರಸ್ಕಾರ ಲಭಿಸಿದೆ. 7 ಡಿಲಿಟ್, 7 ವಿಶ್ವ ಪುರಸ್ಕಾರಗಳು ನನಗೆ ಲಭಿಸಿದೆ ಎಂದು ನೆನಪಿಸಿಕೊಂಡರು.

ಇತಿಹಾಸ ಮರೆಯದೆ ಪ್ರಜಾಪ್ರಭುತ್ವವನ್ನು ದೃಢಪಡಿಸಬೇಕು. ಸಂವಿಧಾನದ ಹತ್ಯೆ ಮಾಡಿದವರು ಯಾರು ಎಂದು ಯುನಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು. ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಿಜೆಪಿ ಸದಾ ಬದ್ಧ ಎಂದು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.

ನಮ್ಮದು ಕುಟುಂಬಾಧಾರಿತ ಪಕ್ಷವಲ್ಲ. ನೆಹರೂ ಅವರಿಂದ ಆರಂಭಿಸಿ ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ ಪಕ್ಷವು ಕುಟುಂಬ ಆಧರಿತ ಪಕ್ಷವಾಗಿ ಕೆಲಸ ಮಾಡಿದೆ. ಬಡತನ ನಿರ್ಮೂಲನ (ಗರೀಬಿ ಹಠಾವೋ) ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡರು ಮಾತ್ರವಲ್ಲದೆ ಚೇಲಾಗಳ ಬಡತನ ದೂರವಾಗಿದೆ ಎಂದು ವ್ಯಂಗ್ಯವಾಗಿ ನುಡಿದರು. ಬಿಜೆಪಿ ವಿಚಾರಧಾರೆ, ಸಂಘಟನೆ ಕುರಿತು ಅವರು ವಿವರಿಸಿದರು.

ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಮಾಡಿದ ಭಾಷಣವನ್ನೂ ಅವರು ಉಲ್ಲೇಖಿಸಿದರು. ಮುಂದೆ ಹಿಂದುಸ್ತಾನದ ಜನರ ಶತಮಾನ ಬರಲಿದೆ ಎಂದು ಅವರು ಹೇಳಿದ್ದನ್ನು ನೆನಪಿಸಿದರು. 10 ಕೋಟಿಗೂ ಹೆಚ್ಚು ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಿದ್ದನ್ನು ತಿಳಿಸಿದರು. ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುವ ಪಕ್ಷ ಎಂದು ಟೀಕಿಸಿದರು. ಚೆನ್ನೈ- ಬೆಂಗಳೂರು ಹೈವೇ ಕಾಮಗಾರಿ ಶೀಘ್ರವೇ ಮುಗಿಯಲಿದೆ ಎಂದು ತಿಳಿಸಿದರು.

ಜಾತಿವಾದದ ಪಕ್ಷ ನಮ್ಮದಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆ ನಮ್ಮದು. ಜನರ ನಡುವೆ ತಾರತಮ್ಯ ಮಾಡಿದ ಪಕ್ಷ ನಮ್ಮದಲ್ಲ ಎಂದು ಅವರು ವಿವರಿಸಿದರು. ಸಂಸತ್ತಿನಲ್ಲಿ ಹಿಂದೂ ಶಬ್ದವನ್ನು ಟೀಕಿಸಿದ್ದು ದೌರ್ಭಾಗ್ಯಕರ ಎಂದು ನುಡಿದರು.

ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರಗಳನ್ನು ನಾವು ಬಲಪಡಿಸಬೇಕಿದೆ. ಸ್ವದೇಶಿ, ಸ್ವಾವಲಂಬನೆ ಮೂಲಕ ಅಭಿವೃದ್ಧಿ ಕಡೆ ನಾವು ಗಮನ ಕೊಡುತ್ತಿದ್ದೇವೆ. ಇದೇ ಬಿಜೆಪಿಯ ಅಜೆಂಡ ಎಂದು ತಿಳಿಸಿದರು. ಸಮಸ್ಯೆಗಳನ್ನು ಸವಾಲನ್ನಾಗಿ ಪರಿವರ್ತನೆ ಮಾಡಿಕೊಂಡು ಮುನ್ನಡೆಯೋಣ ಎಂದು ಮನವಿ ಮಾಡಿದರು.

ಹಿಂದುಸ್ತಾನವನ್ನು ವಿಶ್ವ ಗುರು ಮಾಡುವ ಸಂಕಲ್ಪ ನಮ್ಮದು. ನಿಮ್ಮಂಥ ದೇವದುರ್ಲಭ ಕಾರ್ಯಕರ್ತರು ನಮ್ಮ ಜೊತೆಗಿರುವುದು ನಮ್ಮ ಸೌಭಾಗ್ಯ. ಸಂಸದ ಮಾಜಿ ಆಗಬಹುದು. ಆದರೆ, ಕಾರ್ಯಕರ್ತ ಯಾವತ್ತೂ ಮಾಜಿ ಆಗುವುದಿಲ್ಲ ಎಂದು ತಿಳಿಸಿದರು.

ಅಧಿಕಾರ ಬರುತ್ತದೆ; ಹೋಗುತ್ತದೆ. ಆ ಕುರಿತು ಚಿಂತೆ ಮಾಡಬೇಡಿ. ಸೂರ್ಯೋದಯ, ಸೂರ್ಯಾಸ್ತಮಾನ ಆಗುತ್ತಿರುತ್ತದೆ. ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದು ಕಿವಿಮಾತು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ