ಹೊಸ ಬದುಕಿನ ಬೆಳಗಿಗೊಂದು ಸ್ವಾಗತ

ಸೋಮವಾರ, 31 ಡಿಸೆಂಬರ್ 2018 (19:33 IST)
ನೋಡ ನೋಡುತ್ತಲೇ ಹೊಸವರುಷ ಬಂದೇ ಬಿಡ್ತು. ಗೋಡೆ ಮೇಲೆ ಹೊಸ ಕ್ಯಾಲೆಂಡರ್ ತೂಗುವ ಹೊತ್ತು. ಟೇಬಲ್ ಮೇಲೆ ಹೊಸ ಡೈರಿಯೊಂದು ಪುಟ ತೆರೆಯುವ ಗಳಿಗೆ ಒಂದಷ್ಟು ಹೊಸ ನಿರ್ಧಾರ, ಹಳೆಯ ನೆನಪುಗಳನ್ನು ಮರೆಯುವ ಹುನ್ನಾರ ಹೀಗೆ ಏನೇನೋ ಈ ಹೊಸ ವರುಷವೆಂಬ ಸಂಭ್ರಮದ ಪಟ್ಟಿಗೆ/ ಬುಟ್ಟಿಗೆ ಸೇರುತ್ತಲೇ ಹೋಗುತ್ತದೆ. ಒಂದು ವರ್ಷದ ಪ್ರಾರಂಭ ಮತ್ತೊಂದು ವರುಷದ ಅಂತ್ಯ. ಇವರೆಡು ಜೀವನದ ಕಟು ಸತ್ಯವನ್ನು ಅರ್ಥ ಮಾಡಿಸುತ್ತದೆಯೇನೋ!
ಅರೆ… ಮೊನ್ನೆ ಮೊನ್ನೆಯಷ್ಟೇ 2018 ಎಂದು ಬರೆದ ಪೆನ್ನು 2019 ಎಂದು ಬರೆಯುವುದಕ್ಕೆ ಶುರುಮಾಡುತ್ತೆ. ಬದಲಾವಣೆ ಜಗದ ನಿಯಮ ಎಂಬಂತೆ ನಮ್ಮ ಮನಸ್ಸು ಕೂಡ ಅದಕ್ಕೆ ತೆರೆದುಕೊಳ್ಳುತ್ತಲೇ ಹೋಗುತ್ತೆ. ಏನೋ ಒಂದು ರೀತಿಯ ಕಸಿವಿಸಿ, ಆತಂಕದಲ್ಲಿಯೇ ಈ ಹಳೆಯ ವರುಷಕ್ಕೆ ವಿದಾಯ ಹೇಳಿ, ಹೊಸ ವರುಷದ ಸ್ವಾಗತಕ್ಕೆ ತಯಾರಾಗುತ್ತೇವೆ. ಒಂದೊಮ್ಮೆ ಹಿಂದುರುಗಿ ನೋಡಿದಾಗ ಸಮಯ ಹೇಗೆ ಜಾರಿತು  ಎಂಬುದು ಕೂಡ ಅರಿವಿಗೆ ಬರುವುದೇ ಇಲ್ಲ.
 
ಜೀವನದಲ್ಲಿ ಏಳು-ಬೀಳು ಹೇಗೋ ಹಾಗೇ ಈ ವರುಷ ಕೂಡ.ಒಂದು  ರೀತಿ ರೋಲರ್ ಕೋಸ್ಟರ್ ವರ್ಷ ಎಂದು ಹೇಳಬಹುದುದೇನೋ. ದಿನಗಳೆಂದಂತೆ ಕ್ಯಾಲೆಂಡರ್ ವರುಷದ ಕೊನೆಗೆ ಬಂದಾಗ ಹೊಸ ವರುಷದ ಸ್ವಾಗತಕ್ಕೆ ಜನರು ಸಿದ್ಧರಾಗುತ್ತಾರೆ. ಮತ್ತೆ ಉತ್ಸಾಹ ಪುಟಿದೇಳುತ್ತದೆ.
 
ಈ ಹೊಸ ವರುಷದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಏನೆಂದರೆ ನಮಗೆ ನಾವೇ ಹಾಕಿಕೊಳ್ಳುವ ನಿರ್ಧಾರಗಳು. ಅದನ್ನು ಪೂರ್ಣಗೊಳಿಸುವುದಕ್ಕೆ ಹಾಕಿಕೊಳ್ಳುವ ದಿನದ ಗಡುವು. ಈ ವರುಷದಿಂದ ಕುಡಿಯುವುದು/ ಧೂಮಪಾನ ಮಾಡುವುದನ್ನು ಬಿಡುತ್ತೇನೆ. ಜಗಳ ಆಡುವುದು, 
 
ಕೋಪಮಾಡಿಕೊಳ್ಳುವುದು ಬಿಡುತ್ತೇನೆ. ದೇಹದ ತೂಕ ಹೆಚ್ಚಾಗಿದೆ ತೂಕ ಇಳಿಸಿಕೊಳ್ಳುತ್ತೇನೆ. ಉಳಿತಾಯ ಮಾಡುತ್ತೇನೆ ಹೀಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ನಿರ್ಧಾರಗಳು. ಹುಟ್ಟಿದ ದಿನ, ಹೊಸ ವರುಷ ಬಂದಾಗ ಸರ್ವೇ ಸಾಮಾನ್ಯವಾಗಿ ಹೊಸ ಹೊಸ ನಿರ್ಧಾರಗಳು ರೂಪ ತಳೆಯುವ ದಿನ. ಆದರೆ ಕೆಲವೊಂದನ್ನು ಒಂದಷ್ಟು ದಿನ ಪಾಲಿಸಿ ಮತ್ತೆ ಜೀವನದ ಜಂಜಾಟದಲ್ಲಿ ಮರೆತುಬಿಡುತ್ತೇವೆ. 
 
ಇನ್ನು ಹೊಸ ವರುಷಕ್ಕೆಲ್ಲಾ ಹೊಸತು ಎಂಬ ಭಾವನೆ ಮೊದಲಿನಿಂದಲೂ ನಮ್ಮ ಮನದಲ್ಲಿ ಗಟ್ಟಿಯಾಗಿ ತಳವೂರಿರುತ್ತದೆ. ಹಾಗಾಗಿ ಮೊದಲು ಸ್ವಚ್ಛತೆಯ ಕಡೆಗೆ ಗಮನ ಕೊಡುತ್ತೇವೆ. ಇಲ್ಲಿ ಮೈ-ಮನ ಹಾಗೂ ಮನೆ ಇವು ಮೂರು ಸ್ವಚ್ಛಗೊಂಡರೆ ಬದುಕೇ ಸುಂದರ ಎನ್ನಬಹುದೇನೋ.  
 
ಹೊಸ ವರುಷದ ಸಂಭ್ರಮದ ಬಗ್ಗೆ ಹೇಳೋಣವೆಂದರೆ ಮೊದಲು ನೆನಪಿಗೆ ಬರುವುದು ಪಟಾಕಿ. ಮನಸ್ಸಿನ ಖುಷಿಗೆ ಬಾನಂಗಳದಲ್ಲಿ ಚಿತ್ತಾರ ಬಿಡಿಸುವ ಪಟಾಕಿಗಳನ್ನು ಸಿಡಿಸಿ ಖುಷಿಪಡುತ್ತೇವೆ.  ಗೆಳೆಯರೊಂದಿಗೆ, ನಮ್ಮ ಮನಸ್ಸಿಗೆ ಆಪ್ತರಾದವರೊಂದಿಗೆ ಇದ್ದು ಹೊಸವರುಷದ ಸ್ವಾಗತಕ್ಕೆ ಸಜ್ಜಾಗುತ್ತೇವೆ. 
ಇನ್ನು ಗಡಿಯಾರ ಮಧ್ಯರಾತ್ರಿ 12 ಎಂದು ತೋರಿಸಿದಾಗ ಎಲ್ಲೆಡೆ ಕಿವಿಗಪ್ಪಡಿಸಿ ಕೇಳುವ ಹ್ಯಾಪಿ ನ್ಯೂಯರ್ ಏನೋ ಒಂದು ಹೊಸ ಹುರುಪು ತುಂಬುತ್ತದೆ. ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ ಇನ್ನು ಕೆಲವರು ಮನೆ ಮುಂದೆ ದೀಪ ಬೆಳಗಿ ಸಂಭ್ರಮಿಸುತ್ತಾರೆ. ಇನ್ನು ಕೆಲವರು ಸ್ನೇಹಿತರ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಹೊಸ ವರುಷವನ್ನು ಬರಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಇದನ್ನೇ ಒಂದು ನೆಪವಾಗಿಸಿಕೊಂಡು ತಮ್ಮ ಸಂಸಾರದೊಂದಿಗೆ ಬೇರೆ ಸ್ಥಳಕ್ಕೆ ಹೋಗುತ್ತಾರೆ.ಇದಕ್ಕಾಗಿ ಒಂದು ತಿಂಗಳ ಮೊದಲೇ ಯೋಜನೆ ಕೂಡ ಹಾಕಿಕೊಳ್ಳುತ್ತಾರೆ. ಇದು ಕೂಡ ಸಂಭ್ರಮದ ಒಂದು ಹೊಸ ಬಗೆ ಅಷ್ಟೇ. ಇನ್ನು ಕೆಲವರು ಈ ಜಂಜಾಟವೇ ಬೇಡವೆಂದು ಮನೆಯಲ್ಲಿ ಟೀವಿ ಮುಂದೆ ಕುಳಿತು ಸಂಭ್ರಮವನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ.ಒಟ್ಟಾರೆ ಅವರರವರ ಸಂಭ್ರಮ ಅವರವರದ್ದು.
 
ಚರ್ಚ್ ನಲ್ಲಿ ನಡೆಯುವ ಪ್ರಾರ್ಥನೆ, ದೇವಸ್ಥಾನದಲ್ಲಿನ ಪೂಜೆ ಎಲ್ಲಕ್ಕೂ ಹೊಸ ವರುಷದ ಸಂಭ್ರಮವಿರುತ್ತದೆ. ನಾವು ಕಾಲಿಡುತ್ತಿರುವ ಹೊಸ ವರುಷ ನೆಮ್ಮದಿ ತರಲಿ ಎಂಬ ಆಶಯ ಎಲ್ಲರದ್ದಾಗಿರುತ್ತದೆ.
 
ಬದುಕೆಂಬುವುದು ಒಂದು ಪುಸ್ತಕದಂತೆ. ಅದರ ಮೊದಲ ಅಧ್ಯಾಯವೇ ಒಂದು ಹೊಸ ಬೆಳಗು/ಹೊಸ ದಾರಿಯನ್ನು ತೋರುತ್ತದೆ. ಸರಿಯಾದ ಆಯ್ಕೆ, ದೃಢ ಮನಸ್ಸು ಇದ್ದರೆ ಗುರಿ ಮುಟ್ಟುವುದು ಕೂಡ ಕಷ್ಟದ ಕೆಲಸವಲ್ಲ.  ಏನೇ ಆಗಲಿ 2018 ಕ್ಕೆ ಗುಡ್ ಬೈ ಹೇಳಿ 2019 ಅನ್ನು ಪ್ರೀತಿಯಿಂದ ಬರಮಾಡಿಕೊಳ್ಳೊಣ. ಕೆಟ್ಟದದ್ನ್ನು ಮರೆತು ಒಳ್ಳೆದ್ದನು ಅಪ್ಪಿಕೊಳ್ಳೋಣ. ಆಗ ಬದುಕು ಸುಂದರಮಯವಾಗುತ್ತದೆ. ಎಲ್ಲರಿಗೂ ಹೊಸ ವರುಷ ಹೊಸ ಹರುಷವನ್ನು ತರಲಿ.
 
-ಸತೀಶ್ ಕುಮಾರ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ