ಬೆಂಗಳೂರು: ಏಪ್ರಿಲ್ 26 ಅಂದರೆ ನಾಳೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ನಾಳೆ ಮತದಾನ ನಡೆಯಲಿದೆ. ಈ ದಿನ ಯಾವುದೆಲ್ಲಾ ಕಚೇರಿಗಳಿಗೆ ರಜೆಯಿರಲಿದೆ ಎಂಬ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಚುನಾವಣಾ ಆಯೋಗ ಈಗಾಗಲೇ ಮನವಿ ಮಾಡಿದೆ. ಇದಕ್ಕಾಗಿ ಖಾಸಗಿ ಕಂಪನಿಗಳು ಕಡ್ಡಾಯವಾಗಿ ತಮ್ಮ ನೌಕರರಿಗೆ ರಜೆ ಕೊಡಬೇಕು. ಇಲ್ಲದೇ ಹೋದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಹಾಗಿದ್ದರೆ ನಾಳೆ ಎಲ್ಲಾ ಕಡೆ ಬಂದ್ ವಾತಾವರಣವಿರಲಿದೆಯಾ ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ. ನಾಳೆ ಖಾಸಗಿ ಕಂಪನಿಗಳು ಬಂದ್ ಆಗಲಿವೆ. ಜೊತಗೆ ಬ್ಯಾಂಕ್, ಸರ್ಕಾರಿ ಕಚೇರಿಗಳು, ಹೈಕೋರ್ಟ್ ನ್ಯಾಯಪೀಠಗಳಿಗೆ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇದರ ಹೊರತಾಗಿ ಆಸ್ಪತ್ರೆ, ಮೆಡಿಕಲ್, ತುರ್ತು ಸೇವೆಗಳು, ಹಾಲು, ಹಣ್ಣು, ಅಂಗಡಿ, ವ್ಯಾಪಾರ ಮಳಿಗೆಗಳು ತೆರೆದಿರುತ್ತವೆ. ಖಾಸಗಿ ಮತ್ತು ಸರ್ಕಾರೀ ಬಸ್, ರೈಲು ಸೇವೆ ಎಂದಿನಂತೆ ಮುಂದುವರಿಯಲಿದೆ. ಆದರೆ ಎಲ್ಲೂ ಜನ ಗುಂಪು ಕಟ್ಟಿಕೊಂಡು ನಿಲ್ಲುವಂತಿಲ್ಲ. ಬೆಂಗಳೂರಿನಲ್ಲಂತೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯದಂಗಡಿಗಳೂ ಬಂದ್ ಆಗಿರಲಿವೆ. ನಾಳೆ ಕರ್ನಾಟಕದ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉಳಿದ ಕ್ಷೇತ್ರಗಳಲ್ಲಿ ಮೇ 7 ರಂದು ಮತದಾನ ನಡೆಯಲಿದೆ.