ಬಿಜೆಪಿಗೆ ಬಂದು ಸುಮಲತಾ ಕೈಗೆ ಚೊಂಬು: ರೆಬಲ್ ರಾಣಿ ಮುಂದಿನ ನಡೆಯೇನು

Krishnaveni K

ಶನಿವಾರ, 16 ಮಾರ್ಚ್ 2024 (09:50 IST)
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಮಲತಾ ಅಂಬರೀಶ್ ಕನಸು ಕನಸಾಗಿಯೇ ಉಳಿದಿದೆ. ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ ಗೆ ಮಂಡ್ಯ ಟಿಕೆಟ್ ಬಿಟ್ಟುಕೊಟ್ಟಿದೆ. ಇದರಿಂದ ಸುಮಲತಾ ಕೈಗೆ ಚೊಂಬು ಎಂಬ ಪರಿಸ್ಥಿತಿಯಾಗಿದೆ.

ಕಳೆದ  ಬಾರಿ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಿದ್ದರು. ಆದರೆ ಈಗ ಬಿಜೆಪಿ ಜೊತೆ ಸಖ್ಯ ಬೆಳೆಸಿದ ಸುಮಲತಾ ಮಂಡ್ಯ ಟಿಕೆಟ್ ಗಾಗಿ ಬೇಡಿಕೆಯಿಟ್ಟಿದ್ದರು.

ಆದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೇ ಬಿಟ್ಟುಕೊಡುತ್ತಿದೆ. ಇದು ಮಂಡ್ಯ ಟಿಕೆಟ್ ಈ ಬಾರಿಯೂ ತಮಗೇ ಎಂದಿ ಕನಸು ಕಾಣುತ್ತಿದ್ದ ಸುಮಲತಾಗೆ ಶಾಕ್ ನೀಡಿದಂತಾಗಿದೆ. ಸುಮಲತಾ ಹೆಸರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಕೇಳಿಬರುತ್ತಿದೆ. ಆದರೆ ಸುಮಲತಾಗೆ ಮಂಡ್ಯ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆಯಿಲ್ಲ.

ಬಿಜೆಪಿ ಜೊತೆ ಸಖ್ಯ ಬೆಳೆಸಿರುವುದರಿಂದ ಕುಮಾರಸ್ವಾಮಿ ಹಾದಿ ಸುಗಮವಾಗಿದೆ. ಇತ್ತ ಕುಮಾರಸ್ವಾಮಿಗೆ ಮಂಡ್ಯ ಪ್ರತಿಷ್ಠೆಯ ಕಣವಾಗಿತ್ತು. ಹೀಗಾಗಿ ಇಲ್ಲಿ ಮತ್ತೆ ನಿಖಿಲ್ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಆದರೆ ಅತ್ತ ಸುಮಲತಾ ಬಿಜೆಪಿಗೆ ಬಂದು ಕೈಗೆ ಕ್ಷೇತ್ರವನ್ನೂ ಕಳೆದುಕೊಂಡು ಕೂತಿದ್ದಾರೆ. ಬೇರೆ ಅಸಮಾಧಾನಿತರಂತೆ ಅವರು ಇನ್ನೂ ಬಂಡಾಯವೆದ್ದಿಲ್ಲ. ಆದರೆ ಅವರ ಮುಂದಿನ ನಡೆ ಏನಿರಬಹುದು ಎಂದು ಕುತೂಹಲ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ