ಸುಮಲತಾ ಎಲ್ಲಿದ್ದೀಯಮ್ಮಾ? : ವೀರಶೈವ ಮಹಾಸಭೆ ಗರಂ

ಸೋಮವಾರ, 28 ಅಕ್ಟೋಬರ್ 2019 (19:09 IST)
ಸ್ವಾಭಿಮಾನದ ಹೆಸರಿನಲ್ಲಿ ಮಂಡ್ಯ ಜಿಲ್ಲೆಯ ಜನತೆಗೆ ಮಂಕುಬೂದಿ ಎರಚಿ ಚುನಾವಣೆಯಲ್ಲಿ ಗೆದ್ದು ಸಂಸದೆಯಾದ ನಂತರ ಜಿಲ್ಲೆಗೆ ಕಾಟಾಚಾರಕ್ಕೆ ಸುಮಲತಾ ಭೇಟಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿರುವ ನಡುವೆಯೇ ಸುಮಲತಾ ಎಲ್ಲಿದ್ದೀಯಮ್ಮಾ? ಎಂಬ ಪ್ರಶ್ನೆ ಕೇಳಿಬಂದಿದೆ.

ಮಂಡ್ಯದ ಗಂಭೀರ ನೆರೆ ಪರಿಸ್ಥಿತಿಯನ್ನು ಅವಲೋಕನ ನಡೆಸಿ ರೈತರಿಗೆ ಪರಿಹಾರವನ್ನು ದೊರಕಿಸಿಕೊಡದ
ಸಂಸದೆ ಸುಮಲತಾ ಅಂಬರೀಶ್ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮತ್ತು ಉಪವಿಭಾಗಾಧಿಕಾರಿ ಶೈಲಜಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕೆ.ಆರ್.ಪೇಟೆ ವೀರಶೈವ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ ಗಂಭೀರ ಆರೋಪ ಮಾಡಿದ್ದಾರೆ.

ಜಿಲ್ಲೆಗೆ ಕಾಟಾಚಾರದ ಭೇಟಿ ನೀಡಿ ನಾಪತ್ತೆಯಾಗಿರುವ ಸುಮಲತಾ ಅವರನ್ನು ಸುಮಲತಾ ಎಲ್ಲಿದ್ದೀಯಮ್ಮ? ಎಂದು ಛೇಡಿಸಿದ್ದಾರೆ ಧನಂಜಯ.

ಸೂಜಿಗಲ್ಲು ಗುಡ್ಡದಕೆರೆ, ಸಿಂದಘಟ್ಟ ಕೆರೆ, ಹರಳಹಳ್ಳಿ ಕೆರೆ ಕೋಡಿಗಳು ಒಡೆದು 800 ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಭತ್ತ, ಕಬ್ಬು, ಬಾಳೆ ಮತ್ತು ಅಡಿಕೆ ಬೆಳೆಗಳು ನಷ್ಟವಾಗಿವೆ.15 ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಷ್ಟ ಉಂಟಾಗಿದೆ.

ಹೊಸಹೊಳಲು, ಮತ್ತಿಘಟ್ಟ, ಹಿರಳಹಳ್ಳಿ, ಕಾಳೇಗೌಡನಕೊಪ್ಪಲು, ದೊದ್ದನಕಟ್ಟೆ, ಯಗಚಗುಪ್ಪೆ, ವಿಠಲಾಪುರ, ಹರಳಹಳ್ಳಿ, ಮರುವನಹಳ್ಳಿ, ಬೇಲದಕೆರೆ, ಊಚನಹಳ್ಳಿ, ಮುರುಕನಹಳ್ಳಿ ಗ್ರಾಮಗಳಲ್ಲಿ ನೂರಾರು ಎಕರೆ ಕೃಷಿಭೂಮಿಯು ಕೊರಕಲು ಬಿದ್ದು ರೈತರು ಸಂಕಷ್ಟದಲ್ಲಿದ್ದಾರೆ. 

ಪ್ರವಾಹ ಸಂಭವಿಸಿ ವಾರ ಕಳೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸಂಸದರಾಗಲೀ, ಜಿಲ್ಲಾಧಿಕಾರಿಗಳಾಗಲೀ ತಾಲ್ಲೂಕಿನ ರೈತರ ಕಷ್ಟಸುಖಗಳನ್ನು ಆಲಿಸಿಲ್ಲ ಎಂದು ದೂರಿದ್ರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ