ದಾವಣಗೆರೆ: ವಿಶ್ವದಲ್ಲೇ ಗೋಮಾಂಸ ರಫ್ತುವಿನಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಿತ್ಯ ಬೆಳಗಾದರೆ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಗೆ ಇದನ್ನು ತಡೆಯಲು ಈವರೆಗೆ ಏಕೆ ಸಾಧ್ಯವಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದ 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಗೋಮಾತೆಯ ಜಪ ಮಾಡುವ ಮುಖ್ಯಮಂತ್ರಿಯನ್ನು ಹೊಂದಿದ ಉತ್ತರಪ್ರದೇಶದಲ್ಲಿ ಗೋಮಾಂಸಕ್ಕೆ ಕಡಿವಾಣ ಬಿದ್ದಿಲ್ಲ. ನಾಯಿಗೆ ಪೌಷ್ಟಿಕಾಂಶಯುಕ್ತ ಆಹಾರದ ಕುರಿತು ಟೀಕೆ ಮಾಡುವ ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡಬೇಕು ಎಂದರು.
ಖೇಲೊ ಇಂಡಿಯಾದ ಅಡಿಯಲ್ಲಿ ಗುಜರಾತಿಗೆ ₹600 ಕೋಟಿ ನೀಡಲಾಗಿದೆ. ಉತ್ತರಪ್ರದೇಶಕ್ಕೆ ₹400 ಕೋಟಿ ಹಂಚಿಕೆಯಾಗಿದೆ. ಈ ರಾಜ್ಯಗಳಲ್ಲಿ ಒಬ್ಬರೇ ಒಬ್ಬರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ನಿದರ್ಶನ ಇಲ್ಲ. ಆದರೆ, ತಮಿಳುನಾಡಿಗೆ ₹ 43 ಕೋಟಿ ಮಾತ್ರ ಕೊಡಲಾಗಿದೆ. ಅತಿ ಹೆಚ್ಚು ಕ್ರೀಡಾ ಪದಕ ಗೆದ್ದ ಪಂಜಾಬ್ ಮತ್ತು ಹರಿಯಾಣಕ್ಕೆ ಕಡಿಮೆ ಅನುದಾನ ನೀಡಲಾಗಿದೆ. ಈ ತಾರತಮ್ಯ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.