ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಬೊಮ್ಮಾಯಿ ಮುಂದಾಗಿರುವುದೇಕೆ..?

ಸೋಮವಾರ, 3 ಜನವರಿ 2022 (20:07 IST)
“ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಿಂದೂ ಸಂಘಟನೆಗಳ ಬಹುಕಾಲದ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಅವರು ಮುಂದಾಗಿದ್ದಾರೆ.
 
“ರಾಜ್ಯದಲ್ಲಿನ ಹಿಂದೂ ದೇವಾಲಯಗಳು ವಿವಿಧ ರೀತಿಯ ನಿಯಂತ್ರಣದಲ್ಲಿವೆ. ಅಧಿಕಾರಿಗಳಿಂದ ನೊಂದ ದೇವಸ್ಥಾನಗಳಿಗೆ ಮುಕ್ತಿ ಸಿಗಲಿದೆ. ದೇವಸ್ಥಾನದ ಆಡಳಿತ ಮಂಡಳಿಗಳು ತಮ್ಮ ಅಭಿವೃದ್ಧಿಯನ್ನು ತಾವೇ ನೋಡಿಕೊಳ್ಳುವ ಹಕ್ಕು ನೀಡುವ ಕಾನೂನನ್ನು ತರುತ್ತೇವೆ” ಎಂದು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ.
 
ಕರ್ನಾಟಕವು ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಅಥವಾ ಮುಜರಾಯಿ ಇಲಾಖೆಯ ಅಡಿಯಲ್ಲಿ ಸುಮಾರು 34,563 ದೇವಾಲಯಗಳಿವೆ. ಅವುಗಳಲ್ಲಿ 205 ದೇವಾಲಯಗಳು ಕೆಟಗರಿ ಎ ಅಡಿಯಲ್ಲಿ ಬರುತ್ತವೆ. ಅಂದರೆ 25 ಲಕ್ಷ ರೂ.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿರುವ ದೇವಾಲಯಗಳನ್ನು ಈ ಕೆಟಗರಿಯಲ್ಲಿ ಗುರುತಿಸಲಾಗಿದೆ. 139 ದೇವಾಲಯಗಳು ಕೆಟಗರಿ ಬಿ ಅಡಿಯಲ್ಲಿ ಬರುತ್ತವೆ. ಇವುಗಳು 5 ಲಕ್ಷದಿಂದ 25 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುತ್ತವೆ. ಇದಕ್ಕಿಂತ ಕಡಿಮೆ ಆದಾಯ ಹೊಂದಿರುವ ದೇವಾಲಯಗಳು ಕೆಟಗರಿ ಸಿ ಅಡಿಯಲ್ಲಿ ಬರುತ್ತವೆ.
 
2018-20ರಲ್ಲಿ ಎ ಮತ್ತು ಬಿ ವರ್ಗದ ದೇವಾಲಯಗಳು 1,383.63 ಕೋಟಿ ರೂ.ಗಳನ್ನು ಗಳಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್ -19ರ ಲಾಕ್‌ಡೌನ್ ನಿಂದಾಗಿ ದೇವಾಲಯಗಳ ಆದಾಯ ಕುಸಿತ ಕಂಡಿತು. 2021ರ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ.
 
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ ಪ್ರಕಾರ ದೇವಾಲಯಗಳ ವೆಚ್ಚವನ್ನು ಕಡಿತಗೊಳಿಸಿದ ನಂತರ, ಎ ಮತ್ತು ಬಿ ದರ್ಜೆಯ ದೇವಾಲಯಗಳು ಕ್ರಮವಾಗಿ ತಮ್ಮ ನಿಧಿಯ 10% ಮತ್ತು 5% ಅನ್ನು ಮುಜರಾಯಿ ಇಲಾಖೆಗೆ ನೀಡಬೇಕಾಗುತ್ತದೆ. ಈ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕು.
 
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳಿಂದ ಬರುವ ಆದಾಯವನ್ನು ಇತರೆ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ದೇವಾಲಯದ ನಿಧಿಯ ಲೆಕ್ಕಪರಿಶೋಧನೆಯು ದೀರ್ಘಕಾಲದವರೆಗೆ ಸಮಸ್ಯೆಯಾಗಿರುವುದರಿಂದ ಈ ಆರೋಪವು ಬಲವಾಯಿತು ಎಂದು ಮೂಲವೊಂದು ತಿಳಿಸಿದೆ.
 
ಹೆಚ್ಚು ಆದಾಯವನ್ನು ಹೊಂದಿರುವ ದೇವಾಲಯಗಳು ಸರ್ಕಾರದ ನಿರ್ಧಾರದಿಂದ ಸಂತೋಷಪಟ್ಟರೂ, ಸರ್ಕಾರದ ನೆರವನ್ನು ಅವಲಂಬಿಸಿರುವ ಕಡಿಮೆ ಆದಾಯದ ದೇವಾಲಯಗಳಿಗೆ ಹೊಡೆತ ಬೀಳಲಿದೆ ಎಂದು ಮುಜರಾಯಿ ಇಲಾಖೆಯ ಮೂಲಗಳು ತಿಳಿಸಿವೆ.
 
2020-21ರಲ್ಲಿ ಮುಜರಾಯಿ ಇಲಾಖೆಯು ರಾಜ್ಯಾದ್ಯಂತ ದೇವಾಲಯಗಳ ಅಭಿವೃದ್ಧಿಗೆ ಸುಮಾರು 208.29 ಕೋಟಿ ರೂ. ನೀಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಗೆ ಅತಿ ಹೆಚ್ಚು (15.33 ಕೋಟಿ ರೂ.) ಅನುದಾನ ನೀಡಲಾಗಿದೆ.
 
ದೇಶದ ಇತರ ಹಲವು ಭಾಗಗಳಲ್ಲಿರುವಂತೆ ರಾಜ್ಯದಲ್ಲಿಯೂ ಸರ್ಕಾರದ ‘ನಿಯಂತ್ರಣ’ದಿಂದ ದೇವಾಲಯಗಳನ್ನು ಮುಕ್ತಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ. ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರವು ಇತ್ತೀಚೆಗೆ 51 ದೇಗುಲಗಳನ್ನು ಮಂಡಳಿಯ ಅಡಿಯಲ್ಲಿ ತರುವ ನಿರ್ಧಾರವನ್ನು ರದ್ದುಗೊಳಿಸಿತು.
 
ಈ ಕ್ರಮವನ್ನು ಸ್ವಾಗತಿಸಿದ ರಾಷ್ಟ್ರೀಯ ಹಿಂದೂ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, “ಭಕ್ತರು ನೀಡುವ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಆದರೆ ಈಗ ಈ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ” ಎಂದಿದ್ದರು.
 
ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಗಳಿಸುವ ಮತ್ತು ಸರ್ಕಾರದ ಸಹಕಾರ ಅಗತ್ಯವಿರುವ 34,000 ದೇವಾಲಯಗಳ ಕುರಿತು ಮಾತನಾಡಿದ ಮುತಾಲಿಕ್‌, “ಸರ್ಕಾರವು ಮಸೂದೆಯನ್ನು ತರಲಿ. ನಂತರ ನಾನು ಕಾಮೆಂಟ್ ಮಾಡುತ್ತೇನೆ” ಎಂದಿದ್ದಾರೆ.
 
ಈ ಕ್ರಮವನ್ನು ವಿರೋಧಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ದೇವಸ್ಥಾನಗಳು ರಾಜ್ಯದ ಆಸ್ತಿ ಮತ್ತು ಆದಾಯದ ಮೂಲವಾಗಿವೆ. ಕಾಂಗ್ರೆಸ್‌ ಪಕ್ಷವು ಮಸೂದೆಯನ್ನು ವಿರೋಧಿಸಲಿದೆ ಎಂದಿದ್ದಾರೆ.
 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ”ಬಹುತೇಕ ದೇವಾಲಯಗಳು ಈಗಾಗಲೇ ಸ್ವತಂತ್ರವಾಗಿವೆ. ಕೆಲವು ಮಾತ್ರ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ಜನರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡರೂ ಪರವಾಗಿಲ್ಲ. ಆದರೆ, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೊಮ್ಮಾಯಿ ಹೀಗೆ ಹೇಳಿದ್ದಾರೆ. ಅದುವೇ ಸಮಸ್ಯೆ” ಎಂದಿದ್ದಾರೆ.
 
ಯಡಿಯೂರಪ್ಪನವರ ಬದಲಿಯಾಗಿ ಅಧಿಕಾರಕ್ಕೆ ಬಂದಿರುವ ಬೊಮ್ಮಾಯಿ ಅವರ ನಾಯಕತ್ವದ ಕುರಿತು ಚರ್ಚೆಗಳಾಗುತ್ತಿವೆ. ಬೊಮ್ಮಾಯಿ ನಾಯಕತ್ವದ ಸಂಬಂಧ ಇತ್ತೀಚಿನ ರಾಜ್ಯ ಕಾರ್ಯಕಾರಿ ಸಮಿತಿಯ ಅನುಮೋದನೆಯು ಅವರ ವಿರುದ್ಧದ ಧ್ವನಿಯನ್ನು ತಗ್ಗಿಸಿರಬಹುದು. ಆದರೆ ಅದು ಹೆಚ್ಚು ಕಾಲ ಉಳಿಯುತ್ತದೆ ಎಂಬುದೇ ಪ್ರಶ್ನೆ. ಇತ್ತೀಚಿಗೆ ಮತಾಂತರ ವಿರೋಧಿ ಮಸೂದೆ ಜಾರಿಗೊಳಿಸಲು ನೋಡಿದರು. ಹೆಚ್ಚಾಗುತ್ತಿರುವ ಮಾರಲ್‌ಪೊಲೀಸಿಂಗ್‌ ಕುರಿತು ಬೊಮ್ಮಾಯಿ ಮೌನವಹಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ನಾಯಕ ತನ್ನ ಹಿಂದುತ್ವವನ್ನು ರುಜುವಾತು ಮಾಡಬೇಕಿದ್ದು, ಅದರ ಮುಂದುವರಿದ ಭಾಗವಾಗಿ ದೇವಾಲಯ ನಿಯಂತ್ರಣ ಮುಕ್ತಿಯ ಕುರಿತು ಮಾತನಾಡುತ್ತಿದ್ದಾರೆ ಎನ್ನಲಾಗುತ್ತಿದೆ.
 
‘ಶ್ರೀಮಂತ’ ದೇವಾಲಯಗಳು (2019-20 ಆದಾಯದ ಅಂಕಿ-ಅಂಶ)
 
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ: 99.82 ಕೋಟಿ ರೂ.
 
ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು: 45.65 ಕೋಟಿ ರೂ.
 
ಮೈಸೂರು: ಚಾಮುಂಡೇಶ್ವರಿ ದೇವಸ್ಥಾನ ಮತ್ತು ಅರಮನೆ ಆವರಣದಲ್ಲಿನ ದೇವಾಲಯಗಳ ಆದಾಯ 35.23 ಕೋಟಿ ರೂ.
 
ದುರ್ಗಾ ಪರಮೇಶ್ವರಿ ದೇವಸ್ಥಾನ, ಕಟೀಲು: 25.42 ಕೋಟಿ ರೂ.
 
ಶ್ರೀಕಂಠೇಶ್ವರ ದೇವಸ್ಥಾನ, ನಂಜನಗೂಡು: 20.80 ಕೋಟಿ ರೂ.
 
ರೇಣುಕಾ ಎಲ್ಲಮ್ಮ ದೇವಸ್ಥಾನ, ಸವದತ್ತಿ: 16.77 ಕೋಟಿ ರೂ.
 
ದುರ್ಗಾ ಪರಮೇಶ್ವರಿ ದೇವಸ್ಥಾನ, ಉಡುಪಿ ತಾಲೂಕು: 11.43 ಕೋಟಿ ರೂ.
 
ಬನಶಂಕರಿ ದೇವಸ್ಥಾನ, ಬೆಂಗಳೂರು: 9.04 ಕೋಟಿ ರೂ.
 
ಸಿದ್ದಲಿಂಗೇಶ್ವರ ದೇವಸ್ಥಾನ, ಯಡಿಯೂರು: 6.93 ಕೋಟಿ ರೂ.
 
ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ದೊಡ್ಡಬಳ್ಳಾಪುರ: 8.20 ಕೋಟಿ ರೂ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ