ಸಚಿವ ಡಿ.ಕೆ.ಶಿವಕುಮಾರ ಕಣ್ಣೀರು ಹಾಕಿದ್ದು ಏಕೆ?

ಬುಧವಾರ, 15 ಮೇ 2019 (11:30 IST)
ಸಚಿವ ಡಿ.ಕೆ.ಶಿವಕುಮಾರ ಭಾವುಕರಾಗಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಸಚಿವ ದಿ. ಸಿ.ಎಸ್. ಶಿವಳ್ಳಿಯವರದ್ದು ಸರಳ, ಸಾಮಾನ್ಯ ಬದುಕು. ಗ್ರಾಪಂ, ತಾಪಂ ಸದಸ್ಯನಾದರೇ ಸಾಕು ದೊಡ್ಡ ದೊಡ್ಡ ಬಂಗಲೆಯನ್ನು ಕಟ್ಟಿ ಐಶಾರಾಮಿ ಜೀವನ ನಡೆಸುತ್ತಾರೆ. ಆದರೆ ಸಿ.ಎಸ್. ಶಿವಳ್ಳಿ ಸಚಿವರಾದರೂ ಆರ್ಥಿಕ ಮುಗ್ಗಟ್ಟಿನಿಂದ ಯರಗುಪ್ಪಿಯಲ್ಲಿ ತಾವು ವಾಸವಾಗಿದ್ದ ಹಳೆಯ ಮನೆಯನ್ನು ನವೀಕರಣ ಮಾಡಲಾಗದೇ ಇಹಲೋಕ ತ್ಯಜಿಸಿದ್ದಾರೆ.

ಅಂದಹಾಗೆ, ಈ ಮನೆಯ ವಿಚಾರ ಬೆಳಕಿಗೆ ಬಂದಿದ್ದು ಸಚಿವ ಡಿ.ಕೆ. ಶಿವಕುಮಾರ ಅವರಿಂದ. ಯರಗುಪ್ಪಿಯಲ್ಲಿ ಮನೆಯೊಂದು ಕುಸಿದು ಮೂವರು ಪ್ರಾಣ ಕಳೆದುಕೊಂಡಿದ್ದರು. ಇವರ ಮನೆಗೆ ಭೇಟಿ ನೀಡಿದ ಸಚಿವ ಶಿವಕುಮಾರ, ಮನೆ ಮಂದಿಗೆ ಸಾಂತ್ವನ ಹೇಳಿದರು. ಈ ವೇಳೆ ಅವರು ಪಾಪ ಶಿವಳ್ಳಿ ಸಹ ಇಂಥದ್ದೇ ಮನೆಯಲ್ಲಿ ವಾಸವಾಗಿದ್ದರು ಎಂದು ತಮ್ಮ ಆಪ್ತರ ಬಳಿ ವಿಚಾರ ವಿನಿಮಯ ಮಾಡಿಕೊಂಡರು. ಆ ಮನೆಯಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಜಾಗವಿರಲಿಲ್ಲ. ಇಂಥದ್ದೇ ಮನೆಯಲ್ಲಿ ಹುಟ್ಟಿ ಬೆಳೆದ ಸಚಿವ ಶಿವಳ್ಳಿಗೆ ನಾನು ಮನೆ ನವೀಕರಣ ಮಾಡಿಸಿಕೊಳ್ಳುವಂತೆ ಹೇಳಿದ್ದೇ, ಆ ಮನೆ ನವೀಕರಣಗೊಳಿಸದರೋ ಎಂದು ಕೇಳಿದಾಗ, ಆರ್ಥಿಕ ಮುಗ್ಗಟ್ಟಿನಿಂದ ಆ ಮನೆ ನಿರ್ಮಾಣ ಅರ್ಧಕ್ಕೇ ನಿಂತಿದೆ ಎನ್ನುವ ವಿಚಾರ ಸಚಿವರಿಗೆ ಗೊತ್ತಾಯಿತು. ತಾನು ಆ ಮನೆ ನೋಡಬೇಕಲ್ಲವೆಂದು ಹೇಳಿ ಶಿವಳ್ಳಿಯವರ ಮನೆಯತ್ತ ಹೊರಟರು. 

ಕೇವಲ ಒಂದು ಗುಂಟೆ ಜಾಗದಲ್ಲಿ ನಿರ್ಮಾಣದ ಹಂತದಲ್ಲಿದ್ದ ಮನೆಯನ್ನು ಕಂಡು ಸಚಿವ ಶಿವಕುಮಾರ, ಪಾಪ ಶಿವಳ್ಳಿ ಜೀವನದಲ್ಲಿ ಒಂದು ಮನೆಯನ್ನೂ ಕಟ್ಟಿಸಿಕೊಳ್ಳಲಾಗದೇ ನಮ್ಮನ್ನು ಬಿಟ್ಟು ಅಗಲಿದರು. ಶಾಸಕರಾದವರು ಬಂಗಲೆ ಕಟ್ಟಿಸುತ್ತಾರೆ. ಶಿವಳ್ಳಿ ಸಚಿವನಾದರೂ ಒಂದು ಮನೆ ಕಟ್ಟಿಸಿಕೊಳ್ಳಲಾಗಲಿಲ್ಲ. ರಾಜಕಾರಣಿಯಾದವರು ಹೇಗಿರಬೇಕು ಎಂದು ಶಿವಳ್ಳಿ ಪಾಠ ಕಲಿಸಿದ್ದಾರೆ ಎಂದು ನೊಂದು ನುಡಿದರು. 

ಇದೇ ವೇಳೆ ಶಿವಳ್ಳಿ ಕುಟುಂಬ ಸದಸ್ಯರೊಂದಿಗೆ ಸಚಿವ ಡಿ.ಕೆ. ಶಿವಕುಮಾರ ಒಂದಿಷ್ಟು ಕಾಲ ಕಳೆದರು. ಶಿವಳ್ಳಿಯವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಅಧಿಕಾರಕ್ಕಾಗಿಯೂ ಎಂದೂ ಬಡಿದಾಡಿದವರಲ್ಲ. ಅವರ ಸೇವೆಯನ್ನು ಕಂಡು ನಾನೇ ಅವರನ್ನು ಸಚಿವನನ್ನಾಗಿ ಮಾಡುವಂತೆ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ತಂದಿದ್ದೆ. ಇಂಥ ವ್ಯಕ್ತಿ ಇದ್ದಿದ್ದರೆ ನಿಜವಾಗಿಯೂ ಕ್ಷೇತ್ರ ಇನ್ನೊಂದಿಷ್ಟು ಅಭಿವೃದ್ಧಿ ಕಾಣುತ್ತಿತ್ತು. ಹಣ, ಆಸ್ತಿ ಪಾಸ್ತಿ ಮಾಡಲು ಬಡಿದಾಡುವ ರಾಜಕಾರಣಿಗಳ ಮಧ್ಯೆ ಶಿವಳ್ಳಿ ಮಾದರಿಯಾಗಿದ್ದರು ಎನ್ನುವಾಗ ಸಚಿವ ಡಿಕೆಶಿ ಕಣ್ಣಂಚು ತೇವವಾಗಿತ್ತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ