ಬ್ಲೂಫಿಲ್ಮ್ ನೋಡಿಲ್ಲ.. ಜೈಲಿಗೆ ಹೋಗಿಲ್ಲ… ನಾನ್ಯಾಕೆ ರಾಜೀನಾಮೆ ನೀಡಲಿ: ಸಚಿವ ರೈ
ಮಂಗಳವಾರ, 26 ಸೆಪ್ಟಂಬರ್ 2017 (21:31 IST)
ಮೈಸೂರು: ರಾಜೀನಾಮೆ ನೀಡಲು ಏನು ಆಧಾರವಿದೆ. ನಾನೇನು ತಪ್ಪು ಮಾಡಿಲ್ಲ. ಜೈಲಿಗೂ ಹೋಗಿಲ್ಲ. ಗಣಿ ಹಗರಣದಲ್ಲಿಲ್ಲ. ಬ್ಲೂಫಿಲಂ ನೋಡಿಲ್ಲ. ಮತ್ಯಾಕೆ ನಾನು ರಾಜೀನಾಮೆ ನೀಡಬೇಕು ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೂಲಿಬೆಲೆ ಚಕ್ರವರ್ತಿ ವಿಷಯದಲ್ಲಿ ಸೂಲಿಬೆಲೆ ಎಂದು ಹೇಳಿ ಮಾತು ನಿಲ್ಲಿಸಿದ್ದೇನೆ ಅಷ್ಟೆ. ಅದರ ಹೊರತಾಗಿ ಬೇರೇನೂ ಹೇಳಿಲ್ಲ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಹೇಳದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಪರಿಶುದ್ಧವಾಗಿದ್ದೇನೆ. ನಾನೇಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಮೊದಲಿನಿಂದಲೂ ಕರಾವಳಿಯನ್ನು ಟಾರ್ಗೆಟ್ ಮಾಡ್ತಿದೆ. ಅದೇನು ಹೊಸ ವಿಚಾರವಲ್ಲ. ಕರಾವಳಿಯನ್ನು ಪ್ರಯೋಗಾಲಯದ ರೀತಿ ಬಳಸಿಕೊಳ್ಳುತ್ತಿದ್ದಾರೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ನಮ್ಮ ಶಾಸಕರಿದ್ದಾರೆ. ಹೀಗಾಗಿ ಪೈಪೋಟಿ ಇದ್ದೇ ಇರುತ್ತೆ ಎಂದರು.
ಕಾಂಗ್ರೆಸ್ ನನ್ನ ಧರ್ಮ. ಪಕ್ಷ ವಿಷಯದಲ್ಲಿ ನಿಷ್ಠಾವಂತ ನಾನು. ಖಡಕ್ ಆಗಿ ಮಾತನಾಡುತ್ತೇನೆ. ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ತೊಂದರೆಯಾದಾಗ ಕಾಂಗ್ರೆಸ್ ನವರ ಪಾತ್ರವಿರಲಿಲ್ಲ. ಬಿಜೆಪಿ ಮತ್ತು ಎಸ್ ಡಿಪಿಐ ಸಾಮಾಜಿಕ ಸಾಮರಸ್ಯ ಕದಡುವ ಕೆಲಸ ಮಾಡಿದೆ. ಎರಡು ಸಂಘಟನೆಗಳು ಮಾತ್ರ ಸಾಮರಸ್ಯ ಕದಡುತ್ತಿವೆ. ಸಾಮರಸ್ಯ ಹಾಳು ಮಾಡಲಿಕ್ಕೆ ಅವರಿಬ್ಬರಿಂದ ಮಾತ್ರ ಸಾಧ್ಯ. ಅವರದ್ದೇ ಕೆಲಸ. ಬಿಜೆಪಿಯವರಿಗೆ ಎಸ್ ಡಿಪಿಐ ಬ್ಯಾನ್ ಮಾಡಬೇಕೆಂದರೆ ನಮ್ಮ ಅಭ್ಯಂತರವೇನು ಇಲ್ಲ. ದೆಹಲಿಯಲ್ಲಿ ಹೋಗಿ ಎಸ್ ಡಿಪಿಐ ಸಂಘಟನೆಯನ್ನು ನಿಷೇಧ ಮಾಡಿಸಲಿ ಎಂದರು.