ಮುಂದಿನ ಸಿಎಂ ಯಡಿಯೂರಪ್ಪ: ಈಶ್ವರಪ್ಪ

ಗುರುವಾರ, 27 ಅಕ್ಟೋಬರ್ 2016 (11:55 IST)
ಬಾಗಲಕೋಟೆ: ಬಿ.ಎಸ್. ಯಡಿಯೂರಪ್ಪ ನಿರ್ದೋಷಿ ಎಂದು ಸಾಬೀತಾಗಿರುವುದರಿಂದ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಹಕಾರಿಯಾಗಲಿದೆ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಿ.ಎಸ್.ವೈ. ದೋಷಮುಕ್ತವಾಗಿದ್ದು ಪಕ್ಷದ ಕಾರ್ಯಕರ್ತರಿಗೆ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಸಂತೋಷವಾಗಿದೆ. ಇದು ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರಲಿದ್ದು, ಮತ್ತೊಮ್ಮೆ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎನ್ನುವ ವಿಶ್ವಾಸ ಸೃಷ್ಟಿಸಿದೆ ಎಂದರು.
 
ಎಲ್ಲ ಆರೋಪಗಳಿಂದ ಮುಕ್ತವಾಗಿತುವ ಯಡಿಯೂರಪ್ಪ ಈಗ ನಿರಾಳರಾಗಿದ್ದು, ವಿರೋಧಿಗಳಿಗೆ ನ್ಯಾಯಾಲಯದ ಮೂಲಕ ತಿರುಗೇಟು ನೀಡಿದ್ದಾರೆ. ಇನ್ನೇನಿದ್ದರೂ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು, ಪಕ್ಷವನ್ನು ಮತ್ತಷ್ಟು ಬಲವರ್ಧನೆ ಮಾಡಲಿದ್ದಾರೆ. ಹೇಗಿದ್ದರೂ ಮುಂದಿನ ಬಿಜೆಪಿ ಮುಖ್ಯಮಂತ್ರಿ ಅವರೇ ಆಗಲಿದ್ದಾರೆ. ಅದಕ್ಕೆ ಪಕ್ಷದ ಎಲ್ಲ ಮುಖಂಡರ ಸಮ್ಮತಿಯೂ ಇದೆ ಎಂದು ಈಶ್ವರಪ್ಪ ಹೇಳಿದರು.
 
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ತೊರೆದ ಮಾಜಿ ಸಚಿವ ಶ್ರೀನಿವಾಸಪ್ರಸಾದ ಬಿಜೆಪಿ ಪಕ್ಷ ಸಿದ್ದಾಂತದಲ್ಲಿ ನಂಬಿಕೆ ಇಟ್ಟು ಬಂದರೆ ಅವರನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇವೆ. ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಅವರಿಗೆ ಎರಡು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ್ದಾರೆ. ಮುಂದೇನಾಗುತ್ತೋ ಎಂದು ಕಾದು ನೋಡೋಣ ಎಂದರು.
 
ರಾಜ್ಯದಲ್ಲಿ ಶಾಂತಿ ಶಿಸ್ತು ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂಣ೯ ವಿಫಲವಾಗಿದೆ. ಕೊಲೆ, ಸುಲಿಗೆ, ಅತ್ಯಾಚಾರಗಳು ನಿರ೦ತರವಾಗಿ ನಡೆಯುತ್ತಿದ್ದು, ಪೊಲೀಸರ ಭಯವೇ ಇಲ್ಲ ಎನ್ನುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಸರಕಾರವೇ ಟಿಪ್ಪು ಜಯಂತಿ ಆಚರಣೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ