ಪೊಲೀಸ್ ಕಿರುಕುಳ: ಸೆಲ್ಫಿ ವಿಡಿಯೋ ತೆಗೆದು ಆತ್ಮಹತ್ಯೆ

ಮಂಗಳವಾರ, 3 ಮೇ 2016 (08:37 IST)
ಪೊಲೀಸ್ ಪೇದೆಯೋರ್ವರ ಕಿರುಕುಳಕ್ಕೆ ಬೇಸತ್ತ ಯುವಕನೊಬ್ಬ ಸೆಲ್ಫಿ ವಿಡಿಯೋ ತೆಗೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಜಿ.ಕೋಡಿಹಳ್ಳಿಯಲ್ಲಿ ನಡೆದಿದೆ. 
 
ಮೃತನನ್ನು ಎಂ.ಎಂ ರುದ್ರಯ್ಯ (25) ಎಂದು ಗುರುತಿಸಲಾಗಿದ್ದು ಆತ ಮೊಬೈಲ್ ಕರೆನ್ಸಿ ಅಂಗಡಿ ಇಟ್ಟುಕೊಂಡಿದ್ದ.
 
ರುದ್ರಯ್ಯ ರೀಚಾರ್ಜ್ ನೆಪದಲ್ಲಿ ಮಹಿಳೆಯರಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಮುಂದಿಟ್ಟುಕೊಂಡು ತಂಬ್ರಳ್ಳಿ  ಠಾಣೆ ಪೊಲೀಸ್ ಪೇದೆ ಬಸವರಾಜ್,  ನನಗೆ 1 ಲಕ್ಷ ರೂ ಕೊಡಬೇಕು. ಇಲ್ಲವಾದರೆ ನಿನ್ನ ಮೇಲೆ ಪೊಲೀಸ್ ಪ್ರಕರಣ ದಾಖಲಿಸುವುದಾಗಿ ರುದ್ರಯ್ಯನಿಗೆ ಬೆದರಿಕೆ ಒಡ್ಡುತ್ತಿದ್ದನಂತೆ.
 
ಇದರಿಂದ ಬೆದರಿದ್ದ ರುದ್ರಯ್ಯ ಪೇದೆಗೆ 60ಸಾವಿರ ಹಣವನ್ನು ನೀಡಿದ್ದ. ಆದರೆ 1 ಲಕ್ಷ ರೂಪಾಯಿ ನೀಡುವಂತೆ ಪೇದೆ ಬೇಡಿಕೆ ಇಟ್ಟಾಗ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರುದ್ರಯ್ಯನನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
 
ಆತನ ಮನೆಯಲ್ಲಿ ಡೆತ್ ನೋಟ್‌ ಕೂಡ ಸಿಕ್ಕಿದ್ದು, "ನನಗಾದ ನ್ಯಾಯ ಬೇರೆ ಯಾರಿಗೂ ಆಗಬಾರದು. ನನ್ನ ಅವರ ಕಾಲ್ ಡಿಟೆಲ್ಸ್  ತೆಗೆದು ನೋಡಿ, ಆತ ನನಗೆ ಯಾವ ರೀತಿಯಲ್ಲಿ ಬೆದರಿಕೆ ಹಾಕಿದ್ದಾನೆಂದು ಗೊತ್ತಾಗುತ್ತದೆ", ಎಂದಾತ ಬರೆದಿದ್ದಾನೆ.
 
ಹಗರಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

ವೆಬ್ದುನಿಯಾವನ್ನು ಓದಿ