ಹೈದರಾಬಾದ್: ಇತ್ತೀಚೆಗೆ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿತ್ತು. ಇದೀಗ ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಷರತ್ತು ಬದ್ಧ ಜಾಮೀನು ನೀಡಿದ ನ್ಯಾಯಾಲಯವು ಪ್ರತಿ ವ್ಯಕ್ತಿಗೆ ₹10 ಸಾವಿರದ ಎರಡು ಶ್ಯೂರಿಟಿ ಆಧಾರದ ಮೇಲೆ ಮತ್ತು ಮುಂದಿನ ಆದೇಶವದರೆಗೆ ಸೋಮವಾರ ಹಾಗೂ ಶುಕ್ರವಾರದಂದು ತನಿಖಾಧಿಕಾರಿ ಎದುರು ಹಾಜರಾಗುವಂತೆ ಹೇಳಿದೆ.
ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಮಾಡಿದ ಭಾಷಣವನ್ನು ತಿರುಚಿದ ವಿಡಿಯೊವನ್ನು ಕಾಂಗ್ರೆಸ್ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಈ ಸಂಬಂಧ ಬಿಜೆಪಿ ನಾಯಕರು ಏಪ್ರಿಲ್ 27ರಂದು ದೂರು ನೀಡಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಕ್ಷನ್ 469 (ಫೋರ್ಜರಿ), 505(1)ಸಿ (ವದಂತಿ ಹಬ್ಬಿಸುವುದು), 171ಜಿ (ಸುಳ್ಳು ಮಾಹಿತಿ ಹರಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಿರುಚಿದ ವಿಡಿಯೊ ಮತದಾರರನ್ನು ದಾರಿ ತಪ್ಪಿಸುವ ಗುರಿ ಹೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.