ತೇಜಸ್ವಿ ಸೂರ್ಯ ಬಗ್ಗೆ ಆಡಿಯೋ ಕ್ಲಿಪ್ ವೈರಲ್: ಕಾಂಗ್ರೆಸ್ ಗೆ ಸಿಕ್ತು ಪ್ರಬಲ ಅಸ್ತ್ರ?

ಭಾನುವಾರ, 14 ಏಪ್ರಿಲ್ 2019 (15:30 IST)
ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಸಂಬಂಧಿಸಿದಂತೆ ವಿಡಿಯೋ ಕ್ಲಿಪ್‌ ಒಂದು ಓಡಾಡುತ್ತಿದೆ. ತೇಜಸ್ವಿ ಸೂರ್ಯ ಅವರ ವಿರುದ್ಧ ಕೆಲ ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಮೀಟೂ’ ಆರೋಪವನ್ನು ಹೊರಿಸಿದ್ದ ಸೋಮ್ ದತ್ತಾ ಎನ್ನುವ ಮಹಿಳೆಯೊಬ್ಬರು ತಮ್ಮ ಪರಿಚಿತರೊಂದಿಗೆ ಫೋನ್ ನಲ್ಲಿ ಮಾತನಾಡಿರುವ ಆಡಿಯೋ ಸಂಭಾಷಣೆಯನ್ನು ಆಧರಿಸಿದ ವಿಡಿಯೊ ಕ್ಲಿಪ್‌ ಇದಾಗಿದೆ ಎನ್ನಲಾಗಿದ್ದು, ಈ ಕುರಿತು ಕಾಂಗ್ರೆಸ್ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆಯುತ್ತಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿ ಅಭ್ಯರ್ಥಿಯ ವೈಯಕ್ತಿಕ ವಿಚಾರಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎನ್ನುವುದನ್ನು ಮೊದಲಿಗೇ ಸ್ಪಷ್ಟಪಡಿಸುವುದಾಗಿ ಕೈ ಪಾಳೆಯದ ವಕ್ತಾರ ಹೇಳಿದ್ದಾರೆ.  ಆದರೆ, ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಓಡಾಡುತ್ತಿರುವ ಈ ಕ್ಲಿಪ್‌ ನಲ್ಲಿರುವ ಹಲವು ವಿಷಯಗಳು ಸಾರ್ವಜನಿಕವಾಗಿ ಹತ್ತುಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಆಗಲಿ, ಆಡಿಯೋದಲ್ಲಿರುವ ಮಹಿಳೆ ಎನ್ನಲಾದ ವ್ಯಕ್ತಿಯಾಗಲಿ ಈವರೆಗೆ ಯಾವುದೇ ರೀತಿಯ ಸ್ಪಷ್ಟೀಕರಣ ನೀಡದೆ ಇರುವುದು ಸಹಜವಾಗಿಯೇ ಕ್ಷೇತ್ರದ ಮತದಾರರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಮೊದಲಿಗೆ ತಮ್ಮ ಮಹಿಳಾ ವಿರೋಧಿ ಮಾತು ಹಾಗೂ ಟ್ವೀಟ್‌ಗಳ ಕಾರಣಕ್ಕಾಗಿ ತೇಜಸ್ವಿ ಸೂರ್ಯ ಅವರು ಸುದ್ದಿಯಾದರು. ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಹೇಳಿರುವ ಸೋಮ್‌ ದತ್ತಾ ಎನ್ನುವ ಮಹಿಳೆಯೇ ಈ ಹಿಂದೆ ಸೂರ್ಯ ಅವರು ತಮ್ಮ ಮೇಲೆ ನಡೆಸಿದ್ದ ದೌರ್ಜನ್ಯದ ಬಗ್ಗೆ ಸಾಲುಸಾಲು ಟ್ವೀಟ್‌ಗಳನ್ನು ಮಾಡಿದ್ದರು. ನಂತರ ಆ ಟ್ವೀಟ್‌ಗಳನ್ನು ತೆಗೆಯಲಾಗಿತ್ತು ಎಂದಿದ್ದಾರೆ.

ಇದೀಗ ಕೇಳಿಬಂದಿರುವ ಆಡಿಯೋ ಕ್ಲಿಪ್‌ನಲ್ಲಿ ತೇಜಸ್ವಿ ಸೂರ್ಯ ಅವರ ದೌರ್ಜನ್ಯದ ವಿರುದ್ಧ ತಾನು ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವುದಾಗಿ ಹೇಳಲಾಗಿದೆ. ಈ ಕುರಿತು ಎಫ್‌ ಐ ಆರ್ ಸಹ ದಾಖಲಾಗಿರುವ ಬಗ್ಗೆ ವಿವರಿಸಲಾಗಿದೆ. ಆದರೆ, ಇದಾವುದರ ಬಗ್ಗೆಯೂ ತೇಜಸ್ವಿ ಸೂರ್ಯ ತಮ್ಮ ಎಲೆಕ್ಷನ್‌ ಅಫಿಡವಿಟ್‌ ನಲ್ಲಿ ನಮೂದಿಸಿಲ್ಲ. ಆಡಿಯೋದಲ್ಲಿ ಬಿಜೆಪಿಯ ಪ್ರಭಾವಿ ಶಾಸಕರೊಬ್ಬರ ಬಗ್ಗೆಯೂ ಹೇಳಲಾಗಿದೆ. ಅದೇ ರೀತಿ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿ ನಿಯುಕ್ತಿಗೊಂಡಿರುವ ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ, ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿರುವ ತೇಜಸ್ವಿನಿ ಅನಂತಕುಮಾರ್, ಸಂಸದ ಪ್ರತಾಪ್‌ ಸಿಂಹ ಅವರ ಹೆಸರೂ ಪ್ರಸ್ತಾಪವಾಗಿದೆ.

ಇವರೆಲ್ಲರಿಗೂ ತೇಜಸ್ವಿ ಸೂರ್ಯ ತನ್ನ ಮೇಲೆ ಹಾಗೆಯೇ ತನ್ನಂತೆಯೇ ಇತರ ಮಹಿಳೆಯರ ಮೇಲೆ ದೌರ್ಜನ್ಯವೆಸಗಿರುವ ವಿಚಾರ ತಿಳಿದಿದೆ ಎಂದು ಸೋಮ್‌ ದತ್ತಾ ಎನ್ನಲಾದ ಮಹಿಳೆ ಫೋನ್ ಸಂಭಾಷಣೆಯಲ್ಲಿ ಹೇಳಿದ್ದಾರೆ. ಹೀಗಾಗಿ ಇದಕ್ಕೆಲ್ಲ ಸೂರ್ಯ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹ ಮಾಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ