ಅಫ್ಜಲ್‌ಗೆ ಗಲ್ಲು; ಸೋನಿಯಾ-ಕಲಾಂ ನಡುವೆ ತಿಕ್ಕಾಟ ಇತ್ತೇ?

ಬುಧವಾರ, 16 ಮಾರ್ಚ್ 2011 (11:39 IST)
ಕಾಶ್ಮೀರಿ ಭಯೋತ್ಪಾದಕ, ಸಂಸತ್ ದಾಳಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಿಂದ ಮರಣ ದಂಡನೆ ತೀರ್ಪನ್ನು ಪಡೆದುಕೊಂಡಿರುವ ಮೊಹಮ್ಮದ್ ಅಫ್ಜಲ್ ಗುರು ಮರಣ ದಂಡನೆಯನ್ನು ವಿಳಂಬಿಸುತ್ತಿರುವುದರ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣವಿದೆ ಮತ್ತು ಈ ಕುರಿತು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಡುವೆ ತಿಕ್ಕಾಟ ನಡೆಯುತ್ತಿದೆ ಎಂದು ಅಮೆರಿಕಾ ಅಭಿಪ್ರಾಯಪಟ್ಟಿರುವುದು ಬಹಿರಂಗವಾಗಿದೆ.

ಅಮೆರಿಕಾದ ಭಾರತಕ್ಕಾಗಿನ ರಾಯಭಾರಿ ಜೆಫ್ರಿ ಪ್ಯಾಟ್ 2006ರ ಅಕ್ಟೋಬರ್ 20ರಂದು ದೆಹಲಿಯಿಂದ ವಾಷಿಂಗ್ಟನ್‌ಗೆ ಕಳುಹಿಸಿದ್ದ ಈ ವರದಿಯನ್ನು ಸಂಗ್ರಹಿಸಿರುವ ವಿಕಿಲೀಕ್ಸ್ ರಹಸ್ಯ ದಾಖಲೆಯನ್ನು ಬಹಿರಂಗ ಮಾಡಿರುವುದು 'ದಿ ಹಿಂದೂ' ಆಂಗ್ಲ ಪತ್ರಿಕೆ. ಅದರ ಪ್ರಕಾರ ಅಫ್ಜಲ್ ಗುರು ಮರಣ ದಂಡನೆ ಪ್ರಕರಣವನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ.

ರಾಷ್ಟ್ರಪತಿ ಕಲಾಂ ಮತ್ತು ಸೋನಿಯಾ ಗಾಂಧಿ ನಡುವಿನ ಸುದೀರ್ಘ ಕಾಲದ ವೈಮನಸ್ಸು 2001ರ ಸಂಸತ್ ದಾಳಿಯಲ್ಲಿ ಗಲ್ಲು ಶಿಕ್ಷೆ ಪಡೆದುಕೊಂಡಿರುವ ಅಫ್ಜಲ್ ಗುರು ವಿಚಾರದಲ್ಲಿ ಬೆಳಕಿಗೆ ಬರಬಹುದು ಎಂದು ಹೇಳಿರುವ ಅಮೆರಿಕಾ ರಾಯಬಾರಿ, ಕಾಂಗ್ರೆಸ್ ಪಕ್ಷದ ಸದಸ್ಯ ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಗುಲಾಮ್ ನಬೀ ಆಜಾದ್ ಅವರು ಅಫ್ಜಲ್ ಗುರು ಪರ ವಾದಿಸಿರುವುದು ಮತ್ತು ಆತನಿಗೆ ಕ್ಷಮಾದಾನ ಒದಗಿಸಬೇಕು ಎಂದು ಒತ್ತಡ ಹಾಕಿರುವ ಕುರಿತು ಮಾಧ್ಯಮ ವರದಿಗಳನ್ನು ಆಧರಿಸಿ ತನ್ನ ದೇಶಕ್ಕೆ ಮಾಹಿತಿ ರವಾನಿಸಿದ್ದರು.

ಅಫ್ಜಲ್ ಗುರು ಪ್ರಕರಣದಿಂದ ಮುಂದಕ್ಕೆ ಎದುರಾಗಬಹುದಾದ ಸಮಸ್ಯೆಯನ್ನು ಕೂಡ ಅಮೆರಿಯಾ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಜೆಫ್ರಿ ಪ್ಯಾಟ್ ದಾಖಲಿಸಿದ್ದರು. 'ರಾಷ್ಟ್ರಪತಿಯಾಗಿ ತನ್ನನ್ನು ಎರಡನೇ ಅವಧಿಗೆ ಮುಂದುವರಿಸಲು ಸೋನಿಯಾ ಗಾಂಧಿ ಅವಕಾಶ ನೀಡದೇ ಇದ್ದರೆ, ಅಫ್ಜಲ್ ಗುರು ವಿಚಾರದ ಕುರಿತು ಒತ್ತಡ ಹಾಕುವ ತಂತ್ರವನ್ನು ಕಲಾಂ ಮಾಡಬಹುದು' ಎಂದು ಹೇಳಿದ್ದರು.

ವಿಕಿಲೀಕ್ಸ್ ಸಂಗ್ರಹಿಸಿರುವ ಈ ದಾಖಲೆಯುದ್ದಕ್ಕೂ ಅಫ್ಜಲ್ ಗುರು ಪ್ರಕರಣವನ್ನು ಕಾಂಗ್ರೆಸ್ ಹೇಗೆ ತನ್ನ ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿದೆ ಎಂಬ ವಿವರಣೆಗಳನ್ನು ತನ್ನ ಮೂಗಿನ ನೇರಕ್ಕೆ ಅಮೆರಿಕಾ ರಾಯಭಾರಿ ಬರೆದುಕೊಂಡಿರುವುದು ಬಯಲಾಗಿದೆ.

2007ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಎದುರಿಗಿರುವುದರಿಂದ, ಅಫ್ಜಲ್ ಗುರು ಕ್ಷಮಾದಾನ ವಿಚಾರ ಕಾಂಗ್ರೆಸ್ ಪಾಲಿಗೆ ರಾಜಕೀಯವಾಗಿ ಮಹತ್ವದ ವಿಚಾರವಾಗಿತ್ತು. ಅಫ್ಜಲ್ ಗುರುವಿಗೆ ಕ್ಷಮಾದಾನ ಒದಗಿಸಿದರೆ ಅಥವಾ ಆತನ ಗಲ್ಲುಶಿಕ್ಷೆಯನ್ನು ತಡೆ ಹಿಡಿದರೆ, ಆಗ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ದುರ್ಬಲ ಎಂದು ಬಿಂಬಿಸಬಹುದು. ಒಂದು ವೇಳೆ ಆತನಿಗೆ ಗಲ್ಲು ನೀಡಲು ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದರೆ, ರಾಷ್ಟ್ರಮಟ್ಟದಲ್ಲಿರುವ ಸಾಂಪ್ರದಾಯಿಕ ಮುಸ್ಲಿಮರ ಓಟು ಮತ್ತು ಬೆಂಬಲವನ್ನು ಕಾಂಗ್ರೆಸ್ ಕಳೆದುಕೊಳ್ಳಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿರುವುದನ್ನು ರಾಯಭಾರಿ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದರು.

ವೆಬ್ದುನಿಯಾವನ್ನು ಓದಿ