ವಿಕಿಲೀಕ್ಸ್ ರಹಸ್ಯ ದಾಖಲೆಯಲ್ಲಿ ಎಚ್.ಡಿ. ಕುಮಾರಸ್ವಾಮಿ

ಬುಧವಾರ, 16 ಮಾರ್ಚ್ 2011 (12:15 IST)
ಧರಂ ಸಿಂಗ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತವಿದ್ದ ಸಂದರ್ಭವನ್ನು, ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಜತೆ ಕೈ ಜೋಡಿಸಲು ಯತ್ನಿಸಿರುವುದನ್ನು ಕೂಡ ಅಮೆರಿಕಾ ರಾಯಭಾರಿಗಳು ತಮ್ಮ ದೇಶಕ್ಕೆ ವರದಿ ಮಾಡಿರುವುದು ವಿಕಿಲೀಕ್ಸ್ ದಾಖಲೆಗಳಲ್ಲಿ ಬಹಿರಂಗವಾಗಿದೆ.

2006ರ ಜನವರಿ 27ರಂದು ದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ಅಧಿಕಾರಿ ಬಾಬ್ ಬ್ಲೇಕ್ ಜೂನಿಯರ್ ಅಮೆರಿಕಾಕ್ಕೆ ಕಳುಹಿಸಿರುವ ವರದಿಯಲ್ಲಿ ಈ ಅಂಶಗಳನ್ನು ನಮೂದಿಸಲಾಗಿದೆ. ಇದನ್ನು 'ದಿ ಹಿಂದೂ' ಆಂಗ್ಲ ಪತ್ರಿಕೆ ಪ್ರಕಟಿಸಿದೆ.

ಕಾಂಗ್ರೆಸ್ ತೆಗೆದುಕೊಂಡಿರುವ ತಪ್ಪು ಹೆಜ್ಜೆಗಳು, ನಂತರ ಅನಾಹುತ ನಿಯಂತ್ರಣಕ್ಕೆ ಪಕ್ಷವು ಮುಂದಾಗಿರುವುದು, ಬೇರೆ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಗಮನವನ್ನು ವಿಕೇಂದ್ರೀಕರಣಗೊಳಿಸಿರುವುದು ಮುಂತಾದುವುಗಳನ್ನು ಅಮೆರಿಕಾ ರಾಯಭಾರಿ ತನ್ನ ವರದಿಯಲ್ಲಿ ದಾಖಲಿಸಿದ್ದರು.

'ಕರ್ನಾಟಕದ ಸಮ್ಮಿಶ್ರ ಸರಕಾರವನ್ನು ಸಮರ್ಥವಾಗಿ ನಿರ್ವಹಿಸಲು ವಿಫಲವಾಗಿರುವುದು ಮತ್ತು ಕಾಂಗ್ರೆಸ್‌‍ನ ದುರಂಹಕಾರದಿಂದಾಗಿ ಸರಕಾರವು ಕುಸಿದು ಬೀಳುವ ಸಾಧ್ಯತೆಗಳಿವೆ. 2004ರ ಮೇ ತಿಂಗಳಲ್ಲಿ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯತೀತ) ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸಿದ್ದವು. ಆದರೂ ಈ ಎರಡು ಪಕ್ಷಗಳು ನಿಕಟವಾಗಿ ಸಾಗಲಿಲ್ಲ. 'ಕೋಮುವಾದಿ' ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಮೈತ್ರಿ ಅನಿವಾರ್ಯ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ವಾದಿಸಿದ್ದವು'

'ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಜನವರಿ 18ರಂದು ತನ್ನ ಪಕ್ಷದ ಬಹುತೇಕ ಶಾಸಕರನ್ನು ಬಿಜೆಪಿ ಜತೆ ಸರಕಾರ ರಚಿಸಲು ಮುಂದಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ಗಳು ತಮ್ಮ ಬಹುಮತವನ್ನು ಜನವರಿ 27ರಂದು ಸಾಬೀತುಪಡಿಸಬೇಕಿದೆ'

'ಬಹುತೇಕ ಮಂದಿಯ ಪ್ರಕಾರ ಈ ಮೈತ್ರಿಕೂಟವು ತನ್ನ ಬಹುಮತವನ್ನು ಸಾಬೀತು ಮಾಡಬಹುದು. ಕರ್ನಾಟಕದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ತಪ್ಪಿಸುವುದು ಕೂಡ ಸಾಧ್ಯವಿಲ್ಲ. ನಿರೀಕ್ಷೆಯಂತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಸರಕಾರ ರಚಿಸಿದಂತಾಗುತ್ತದೆ ಮತ್ತು ಕಾಂಗ್ರೆಸ್‌ಗೆ ಅಪಮಾನಕಾರಿ ಹಿನ್ನಡೆಯಾಗುತ್ತದೆ'

ಕಾಂಗ್ರೆಸ್‌ಗೆ 'ಕೈ' ಕೊಟ್ಟು ಬಿಜೆಪಿ ಜತೆ ಕುಮಾರಸ್ವಾಮಿಯವರು ಹೊರಟು ಹೋದ ಸಂದರ್ಭದಲ್ಲಿ ಅಮೆರಿಕಾ ರಾಯಭಾರಿ ಈ ವರದಿಯನ್ನು ತನ್ನ ದೇಶಕ್ಕೆ ರವಾನಿಸಿದ್ದರು. ಹಾಗಾಗಿ ಇಲ್ಲಿ ಆ ಸಂದರ್ಭದ ಬೆಳವಣಿಗೆಗಳು ಮಾತ್ರ ದಾಖಲಾಗಿವೆ.

ವೆಬ್ದುನಿಯಾವನ್ನು ಓದಿ