ಅಯೋಧ್ಯೆ: ಸೋಮವಾರ ಲೋಕಾರ್ಪಣೆಗೊಂಡ ಅಯೋಧ್ಯೆಯ ರಾಮಮಂದಿರ ಮರುದಿನದಿಂದಲೇ ಸಾರ್ವಜನಿಕರಿಗೆ ಮುಕ್ತವಾಗಿತ್ತು.
ನಿನ್ನೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಮೊದಲ ದಿನವೇ ಜನ ಸಾಗರದಂತೆ ಹರಿದು ಬಂದಿದ್ದು ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ನೂಕು ನುಗ್ಗಲು ನಡೆಸಿದ್ದಾರೆ.
ಮೂಲಗಳ ಪ್ರಕಾರ ಮೊದಲ ದಿನ ರಾಮಲಲ್ಲಾನನ್ನು ನೋಡಲು ಬಂದವರ ಸಂಖ್ಯೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ. ಮೊದಲ ದಿನ ಕೊಂಚ ಗಲಿಬಿಲಿಯಾಗಿದ್ದು ನಿಜ. ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಇದರಿಂದಾಗಿ ಕೊಂಚ ತಳ್ಳಾಟ, ನೂಕಾಟ ಸಾಮಾನ್ಯವಾಗಿತ್ತು. ಬೆಳಿಗ್ಗಿನ ಜಾವ 3 ಗಂಟೆಯಿಂದಲೇ ಜನ ದೇವರ ದರ್ಶನಕ್ಕೆ ಕಾದು ನಿಂತಿದ್ದರು.
ಹೀಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜನರನ್ನು ನಿಯಂತ್ರಿಸಲು ಮತ್ತು ದೇವರ ದರ್ಶನ ಸಾಂಗವಾಗಿ ಮಾಡಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಬಹುದು.