ಭೋಪಾಲ್ : ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12 ಚೀತಾಗಳ ಪೈಕಿ ಒಂದು ಚೀತಾ ಭಾನುವಾರ ಸಾವನ್ನಪ್ಪಿದೆ.
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪರಿಚಯಿಸಲಾಗಿದ್ದ 8 ಚೀತಾಗಳ ಪೈಕಿ, ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಹೆಣ್ಣು ಚೀತಾ ಮಾರ್ಚ್ ತಿಂಗಳಲ್ಲಿ ಮೃತಪಟ್ಟಿತ್ತು.
ಇದೀಗ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ ಉದಯ್ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್ ಚೌಹಾಣ್ ತಿಳಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಉದಯ್ ಹೆಸರಿನ ಚೀತಾ ಭಾನುವಾರ ಬೆಳಗ್ಗೆ ಅಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಅರಣ್ಯಾಧಿಕಾರಿಗಳ ತಂಡ ಅದನ್ನು ವೈದ್ಯಕೀಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲು ಪ್ರಾರಂಭಿಸಿತ್ತು. ಆದರೆ ಸಂಜೆ 4 ಗಂಟೆ ವೇಳೆಗೆ ಚಿಕಿತ್ಸೆ ವೇಳೆ ಸಾವನ್ನಪ್ಪಿದೆ. ಸೋಮವಾರ ಪಶುವೈದ್ಯಾಧಿಕಾರಿಗಳ ತಂಡ ಮರಣೋತ್ತರ ಪರೀಕ್ಷೆ ನಡೆಸಲಿದೆ.