ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದರು!

ಬುಧವಾರ, 7 ಜೂನ್ 2023 (11:04 IST)
ಗಾಂಧೀನಗರ : ಕ್ರಿಕೆಟ್ ಆಡುತ್ತಿದ್ದ ಸಂದರ್ಭ ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದಕ್ಕೆ ಗಲಾಟೆ ನಡೆದು, ಇದನ್ನು ಪ್ರಶ್ನಿಸಿದ ದಲಿತ ವ್ಯಕ್ತಿಯ  ಹೆಬ್ಬೆರಳನ್ನೇ ಕತ್ತರಿಸಿರುವ ವಿಕೃತ ಘಟನೆ ಗುಜರಾತ್ನಲ್ಲಿ ನಡೆದಿದೆ.
 
ಗುಜರಾತ್ನ ಪಟಾನ್ ಜಿಲ್ಲೆಯ ಗ್ರಾಮಸ್ಥರು ಭಾನುವಾರ ಶಾಲೆಯೊಂದರ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ.

ಈ ವಿಚಾರ ತಿಳಿದ ಬಾಲಕನ ಸಂಬಂಧಿ ಧೀರಜ್ ಪರ್ಮಾರ್ ಗ್ರಾಮಸ್ಥರಲ್ಲಿ ಬಾಲಕನಿಗೆ ನಿಂದಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕ್ಷಣಕ್ಕೆ ಗಲಾಟೆಯನ್ನು ಇತ್ಯರ್ಥಗೊಳಿಸಲಾಯಿತಾದರೂ ಬಳಿಕ ಸಂಜೆ 7 ಜನರ ಗುಂಪು ಹರಿತವಾದ ಆಯುಧಗಳೊಂದಿಗೆ ಬಂದು ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. 

ಇದೀಗ ಘಟನೆ ಬಗ್ಗೆ ಪೊಲೀಸರು ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ