ಹೆಂಡ್ತಿಗೆ ದೆವ್ವ ಹಿಡಿದಿದೆಂದು ಪತಿ ಈ ರೀತಿ ನಡೆದುಕೊಳ್ಳುವುದಾ, ಕೇರಳದಲ್ಲಿ ಕರುಳು ಹಿಂಡುವ ಘಟನೆ

Sampriya

ಗುರುವಾರ, 30 ಅಕ್ಟೋಬರ್ 2025 (15:51 IST)
Photo Credit X
ಕೊಲ್ಲಮ್: ತಾನು ಹೇಳಿದ ಹಾಗೇ ಕೇಳದ ಪತ್ನಿ ಮೇಲೆ ಕೆರಳಿದ ಪತಿಯೊಬ್ಬ ಬಿಸಿ ಸಾಂಬಾರ್ ಸುರಿದು ಹಲ್ಲೆ ಮಾಡಿರುವ ಘಟನೆ ಕೇರಳದ ಕೊಲ್ಲಮ್‌ ಜಿಲ್ಲೆಯಲ್ಲಿ ನಡೆದಿದೆ. 

ಗಾಯಗೊಂಡ ಪತ್ನಿಯನ್ನು ಚಡಯಮಂಗಲಂ ಸಮೀಪದ ವೈಕ್ಕಲ್‌ನ ರೆಜಿಲಾ ಗಫೂರ್ (36) ಎಂದು ಗುರುತಿಸಲಾಗಿದೆ. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್‌ಐಆರ್‌ ಪ್ರಕಾರ, ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಜೀರ್‌ ತನ್ನ ಪತ್ನಿ ಬಳಿ ತಲೆಕೂದಲು ಹರಡಿಕೊಂಡು ತನ್ನ ಎದುರು ಕುಳಿತುಕೊಳ್ಳುವಂತೆ ಹೇಳಿದ್ದಾನೆ. ನಂತರ ಬೂದಿ ಹಚ್ಚಿಕೊಳ್ಳುವಂತೆ ಹೇಳಿ, ಮಾಂತ್ರಿಕನೊಬ್ಬ ನೀಡಿದ್ದ ಲಾಕೆಟ್‌ ಒಂದನ್ನು ಕಟ್ಟಿಕೊಳ್ಳುವಂತೆ ಹೇಳಿದ್ದಾನೆ. ಇದಕ್ಕೆ ಒಪ್ಪದ ಕಾರಣ ಅಡುಗೆ ಮನೆಯಲ್ಲಿದ್ದ ಬಿಸಿ ಸಾಂಬಾರ್‌ ಅನ್ನು ಆಕೆಯ ಮೇಲೆ ಸುರಿದಿದ್ದಾನೆ. 

ಮಹಿಳೆಯ ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದು ನೋಡಿದಾಗ, ಆಕೆಯ ಸ್ಥಿತಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ತನ್ನ ಪತ್ನಿಗೆ ದೆವ್ವ ಹಿಡಿದಿದೆ ಎಂದು ಸಜೀರ್, ಈ ಹಿಂದೆ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಮಾಂತ್ರಿಕನನ್ನು ಭೇಟಿಯಾಗಿ ಸಲಹೆ ಕೇಳಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಸದ್ಯ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪತ್ತೆ ಕಾರ್ಯ ಶುರು ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ