ಕಾಂಗ್ರೆಸ್ ಸರಕಾರದಿಂದ ಒಳಮೀಸಲಾತಿ ಆದೇಶ ರದ್ದು ಮಾಡುವ ದುರುದ್ದೇಶ: ಗೋವಿಂದ ಕಾರಜೋಳ

Krishnaveni K

ಗುರುವಾರ, 30 ಅಕ್ಟೋಬರ್ 2025 (15:16 IST)
ಬೆಂಗಳೂರು: ಈಗಿನ ವೇಳಾಪಟ್ಟಿ ಪ್ರಕಾರ ಡಿಸೆಂಬರ್ 8ಕ್ಕೆ ಬೆಳಗಾವಿ ಅಧಿವೇಶನ ಆರಂಭ ಆಗಲಿದೆ. ಅಷ್ಟರೊಳಗೆ ಸುಪ್ರೀಂ ಕೋರ್ಟ್, ಹೈಕೋರ್ಟಿನಲ್ಲಿ ಕೇಸುಗಳು ದಾಖಲಾಗಿ ಒಳಮೀಸಲಾತಿ ಕುರಿತ ಆದೇಶ ರದ್ದಾಗಬೇಕೆಂಬುದೇ ಸಿದ್ದರಾಮಯ್ಯರ ಸರಕಾರದ ದುರುದ್ದೇಶ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ಪರಿಶಿಷ್ಟ ಜನಾಂಗ, ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಆಗಬೇಕು. 101 ಜಾತಿಗಳಿಗೆ ಸಾಮಾಜಿಕ ನ್ಯಾಯದಲ್ಲಿ ಎಲ್ಲರಿಗೂ ಮೀಸಲಾತಿ ಸೌಲಭ್ಯ ಸಿಗಬೇಕೆಂದು ನಿರಂತರ ಹೋರಾಟ ಮಾಡಿದ್ದರ ಪ್ರಯುಕ್ತ ನರೇಂದ್ರ ಮೋದಿ ಜೀ ಅವರ ಸರಕಾರವು ಮುತುವರ್ಜಿ ವಹಿಸಿ ನ್ಯಾಯ ದೊರಕಿಸಿ ಕೊಟ್ಟು ಇಂದಿಗೆ ಒಂದು ವರ್ಷ 3 ತಿಂಗಳಾಗಿದೆ. ಆದರೂ ಕರ್ನಾಟಕದ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ವಿಳಂಬ ನೀತಿ ಜೊತೆಗೆ ಗೊಂದಲ ಸೃಷ್ಟಿಸುತ್ತಿದೆ ಎಂದು ಆಕ್ಷೇಪಿಸಿದರು.

ದೋಷಭರಿತ ಆದೇಶಗಳನ್ನು ಮಾಡುತ್ತಿದೆ. ಈ ಮೂಲಕ ಪರಿಶಿಷ್ಟ ಜನಾಂಗದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯರ ಸರಕಾರದ ಆದೇಶವನ್ನು ಪ್ರಶ್ನಿಸಿ ಈಚೆಗೆ ಹೈಕೋರ್ಟಿನಲ್ಲಿ ಕೇಸ್ ಬಂದಾಗ ರಾಜ್ಯ ಸರಕಾರದ ಕಡೆಯಿಂದ ಯಾರೂ ಹಾಜರಾಗಿಲ್ಲ; ಹೀಗಾಗಿ ಆದೇಶ ಭಾಗಶಃ ತಡೆಯಾಗಿದೆ ಎಂದು ವಿವರಿಸಿದರು.
 
 
ಒಂದು ಜಾತಿಯ ಹಿತಕ್ಕಾಗಿ ಸಿದ್ದರಾಮಯ್ಯನವರು ಈ ದೊಂಬರಾಟ ಮಾಡುತ್ತಿದ್ದಾರೆ. 101 ಜಾತಿಯ ಹಿತ ಕಾಯಲು ಅವರು ಬಯಸುತ್ತಿಲ್ಲ ಎಂದು ಗೋವಿಂದ ಕಾರಜೋಳ ಅವರು ಆರೋಪ ವ್ಯಕ್ತಪಡಿಸಿದರು. ಆರ್ಥಿಕ ಸಂಕಷ್ಟ ಇರುವುದರಿಂದ ನೇಮಕಾತಿ ಮುಂದೆ ಹೋದಷ್ಟೂ ಅವರಿಗೆ ಒಳ್ಳೆಯದೆಂಬ ಭಾವನೆ ಇದೆ. ಖಜಾನೆ ಖಾಲಿ ಆಗಿದೆ. ನೇಮಕಾತಿ ಮಾಡಲೂ ಅವರು ತಯಾರಿಲ್ಲ ಎಂದು ದೂರಿದರು.
 
ಮತ್ತೆ ಈ ಜನಾಂಗಕ್ಕೆ ಮೋಸ ಮಾಡಲು ಸಿದ್ದರಾಮಯ್ಯರ ಸರಕಾರ ಇವತ್ತು ಸಂಪುಟ ಸಭೆ ನಡೆಸುತ್ತಿದೆ. ಕರಡು ಮಸೂದೆ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. 5ರೊಳಗೆ ಹೈಕೋರ್ಟಿಗೆ ರಾಜ್ಯ ಸರಕಾರ ತನ್ನ ವಾದವನ್ನು ಮಂಡಿಸಲು ಬೇಕಾದ ವಿವರಣೆ ನೀಡಬೇಕಾಗಿದೆ ಎಂದು ತಿಳಿಸಿದರು.
 
 
ದಲಿತರು, ಅಸ್ಪಶ್ಯರು ಉದ್ಧಾರ ಆಗಬಾರದು ಎಂಬುದೇ ರಾಜ್ಯದ ಕಾಂಗ್ರೆಸ್ ಮನಸ್ಥಿತಿ ಎಂದು ಗೋವಿಂದ ಕಾರಜೋಳ ಅವರು ಆರೋಪಿಸಿದರು.
 
79 ವರ್ಷ ಮತಬ್ಯಾಂಕ್ ಆಗಿದ್ದರು; ಮುಂದೆಯೂ 100 ವರ್ಷ ಮತಬ್ಯಾಂಕ್ ಆಗಿರಬೇಕು ಹಾಗೂ ಅವರು ಉದ್ಧಾರ ಆಗಬಾರದು ಎಂಬುದೇ ಕಾಂಗ್ರೆಸ್ಸಿನ ನೀಚಬುದ್ಧಿ ಎಂದು ಟೀಕಿಸಿದರು.
 
ಸಮಾಜಕಲ್ಯಾಣ ಇಲಾಖೆ ಸಮರ್ಪಕವಾಗಿ ವಾದ ಮಂಡನೆಗೆ ಯಾವುದೇ ತಯಾರಿ ಮಾಡುತ್ತಿಲ್ಲ. ಅವರೇ ನೇಮಿಸಿದ ನ್ಯಾ. ನಾಗಮೋಹನ್‍ದಾಸ್, ನ್ಯಾ.ಸದಾಶಿವ ಅವರ ವರದಿಯನ್ನೂ ಒಪ್ಪಿಲ್ಲ; ನಮ್ಮ ಸರಕಾರದ ಮಾಧುಸ್ವಾಮಿಯವರ ಸಂಪುಟ ಉಪ ಸಮಿತಿ ವರದಿಯನ್ನೂ ಒಪ್ಪಿಲ್ಲ ಎಂದು ದೂರಿದರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ