ದೇಗುಲಗಳಲ್ಲಿ ಪುರುಷರಿಗೆ ಮೇಲ್ವಸ್ತ್ರ ಧರಿಸುವ ನಿಯಮ ರದ್ದು: ಕೇರಳ ಸಿಎಂ ಪಿಣರಾಯಿ ಚಿಂತನೆ

Sampriya

ಗುರುವಾರ, 2 ಜನವರಿ 2025 (14:30 IST)
Photo Courtesy X
ತಿರುವನಂತಪುರ: ಕೆಲವು ದೇವಸ್ಥಾನಗಳ ಒಳಾಂಗಣ ಪ್ರವೇಶಿಸುವ ಮೊದಲು ಪುರುಷರು ತಮ್ಮ ಮೇಲ್ವಸ್ತ್ರವನ್ನು ತೆಗೆದುಹಾಕಬೇಕೆಂಬ ನಿಯಮವನ್ನು ರದ್ದು ಮಾಡಲು ಕೇರಳ ದೇವಸ್ವಂ ಮಂಡಳಿ ಯೋಜಿಸುತ್ತಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಪ್ರಸಿದ್ಧ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ನೀಡಿದ ಹೇಳಿಕೆಯನ್ನು ಅನುಸರಿಸಿ ಮಂಡಳಿಯ ಈ ಕ್ರಮಕ್ಕೆ ಮುಂದಾಗಿದೆ ಎಂದಿದ್ದಾರೆ.

ಮಂಗಳವಾರ ಶಿವಗಿರಿ ತೀರ್ಥೋದ್ಭವ ಸಮಾವೇಶದಲ್ಲಿ ಮಾತನಾಡಿದ ಸ್ವಾಮಿ ಸಚ್ಚಿದಾನಂದ, ಮೇಲ್ವಸ್ತ್ರ ತೆಗೆಯುವ ಪದ್ಧತಿಯನ್ನು ಸಾಮಾಜಿಕ ಅನಿಷ್ಟ ಎಂದು ಬಣ್ಣಿಸಿದ್ದರಲ್ಲದೆ, ಅದನ್ನು ನಿರ್ಮೂಲನೆ ಮಾಡುವಂತೆ ಕರೆ ನೀಡಿದ್ದರು.

ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ಸನ್ಯಾಸಿಗಳ ಕರೆಗೆ ದನಿಗೂಡಿಸಿದ್ದರು. ಅಲ್ಲದೆ ಅಂತಹ ಹೆಜ್ಜೆಯು ಸಾಮಾಜಿಕ ಸುಧಾರಣೆಯಲ್ಲಿ ಮಹತ್ವದ ನಡೆ ಎಂದು ಪರಿಗಣಿಸಬಹುದು ಎಂದಿದ್ದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯನ್, ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ಇಂದು ನನ್ನನ್ನು ಭೇಟಿ ಮಾಡಿ, ಆ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಹೇಳಿದರು. ಅದು ಒಳ್ಳೆಯದು ಎಂದು ನಾನು ಹೇಳಿದೆ ಎಂದು ಹೇಳಿದ್ದಾರೆ. ಯಾವ ದೇವಸ್ವಂ ಮಂಡಳಿಯು ಈ ನಿರ್ಧಾರವನ್ನು ಜಾರಿಗೆ ತರಲಿದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿಲ್ಲ.

ಕೇರಳದಲ್ಲಿ ಗುರುವಾಯೂರ್, ತಿರುವಾಂಕೂರ್, ಮಲಬಾರ್, ಕೊಚ್ಚಿನ್ ಮತ್ತು ಕೂಡಲ್ಮಾಣಿಕ್ಯಂ ಸೇರಿ ಒಟ್ಟು ಐದು ದೇವಸ್ವಂ ಮಂಡಳಿಗಳು ಸುಮಾರು 3,000 ದೇವಾಲಯಗಳನ್ನು ನಿರ್ವಹಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ