ಅದಾನಿ ಷೇರು ಶಾರ್ಟ್ ಸೆಲ್ಲಿಂಗ್, 16 ಕಂಪನಿಗಳಿಗೆ ಭಾರೀ ಲಾಭ

ಗುರುವಾರ, 31 ಆಗಸ್ಟ್ 2023 (12:26 IST)
ನವದೆಹಲಿ : ಹಿಂಡೆನ್ಬರ್ಗ್ ಸಂಶೋಧನಾ ವರದಿ ಬಿಡುಗಡೆಯಾಗುವ ಸಮಯದಲ್ಲಿ ಅದಾನಿ ಸಮೂಹದ ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ ಮಾಡುವ ಮೂಲಕ ಒಂದು ಖಾಸಗಿ ಬ್ಯಾಂಕ್ ಸೇರಿದಂತೆ 16 ಸಂಸ್ಥೆಗಳು ಭಾರೀ ಲಾಭ ಮಾಡಿರುವ ವಿಷಯ ಜಾರಿ ನಿರ್ದೇಶನಾಲಯದ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೇರಿದಂತೆ ಒಂದು ಡಜನ್ ಕಂಪನಿಗಳು ಅದಾನಿ ಗ್ರೂಪ್ನ ಷೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿರುವ ವಿಷಯ ಇಡಿ ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಲಾಭ ಮಾಡಿದ ಸಂಸ್ಥೆಗಳ ಪೈಕಿ ಮೂರು ಭಾರತದಲ್ಲಿ ನೆಲೆಗೊಂಡಿದ್ದರೆ, ನಾಲ್ಕು ಮಾರಿಷಸ್, ಮತ್ತು ಫ್ರಾನ್ಸ್, ಹಾಂಕಾಂಗ್, ಕೇಮನ್ ದ್ವೀಪಗಳು, ಐರ್ಲೆಂಡ್ ಮತ್ತು ಲಂಡನ್ನಲ್ಲಿ ತಲಾ ಒಂದು ಸಂಸ್ಥೆಗಳು ನೆಲೆಗೊಂಡಿವೆ ಎಂದು ಇಡಿ ತನ್ನ ವರದಿಯಲ್ಲಿ ಹೇಳಿದೆ.

ಹಿಂಡೆನ್ಬರ್ಗ್ ವರದಿ ಜನವರಿ 24ರಂದು ಪ್ರಕಟವಾಗಿತ್ತು. ವರದಿ ಪ್ರಕಟವಾಗುವ 2-3 ದಿನಗಳ ಹಿಂದೆ ಕೆಲ ಕಂಪನಿಗಳು ಶಾರ್ಟ್ ಸೆಲ್ಲಿಂಗ್ ಮಾಡಿವೆ. ಅದರಲ್ಲೂ ಕೆಲ ಕಂಪನಿಗಳು ಇದೇ ಮೊದಲ ಬಾರಿಗೆ ಶಾರ್ಟ್ ಸೆಲ್ಲಿಂಗ್ ಮಾಡಿದೆ ಎಂದು ಇಡಿ ಜುಲೈನಲ್ಲಿ ಸಲ್ಲಿಸಿದ ತನಿಖಾ ವರದಿಯಲ್ಲಿ ಸೆಬಿಗೆ ತಿಳಿಸಿದೆ. ಎರಡು ಭಾರತೀಯ ಕಂಪನಿಗಳು ‘ಟಾಪ್ ಶಾರ್ಟ್ ಸೆಲ್ಲರ್’ಗಳಲ್ಲಿ ಕಾಣಿಸಿಕೊಂಡಿವೆ. ಈ ಪೈಕಿ ಒಂದು ದೆಹಲಿಯಲ್ಲಿ ಮತ್ತು ಇನ್ನೊಂದು ಮುಂಬೈನಲ್ಲಿ ನೋಂದಾಯಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ