ಸುಕ್ಮಾ: ಭದ್ರತಾ ಪಡೆಗಳ ಸಿಬ್ಬಂದ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಇಂದು ನಡೆಸಿದ ಎನ್‌ಕೌಂಟರ್‌ನಲ್ಲಿ 10 ನಕ್ಸಲರು ಹತರಾಗಿದ್ದಾರೆ.
ಭದ್ರತಾ ಪಡೆಗಳ ಜಂಟಿ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಭೇಜಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತರ್ ವಲಯದ ಪೊಲೀಸ್ ಅಧಿಕಾರಿ ಸುಂದರರಾಜ್ ಪಿ. ಮಾಹಿತಿ ನೀಡಿದ್ದಾರೆ.
ಕೊರಜ್‌ಗುಡ, ದಾಂತೇಸ್‌ಪುರಂ, ನಗರಂ, ಭಂಡರ್‌ಪುರ ಪ್ರದೇಶಗಳ ಗುಡ್ಡಗಾಡಿನಲ್ಲಿ ಕೊಂಟಾ, ಕಿಸ್ತಾರಂ ನಕ್ಸಲ್ ಸಮಿತಿಗೆ ಸೇರಿದ ಮಾವೋವಾದಿಗಳ ಇರುವಿಕೆಯ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
10 ನಕ್ಸಲರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೆ ಇನ್ಸಾಸ್ ರೈಫಲ್, ಎಕೆ-47 ರೈಫಲ್, ಎಸ್‌ಎಲ್‌ಆರ್ ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಮೀಸಲು ಪಡೆ (ಡಿಆರ್‌ಜಿ) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕಾರ್ಯಾಚರಣೆ ಮುಂದುವರಿದಿದೆ.
ಸುಕ್ಮಾ ಜಿಲ್ಲೆ ಒಳಗೊಂಡಂತೆ ಬಸ್ತರ್ ಪ್ರದೇಶದ ಏಳು ಜಿಲ್ಲೆಗಳಲ್ಲಿ ಇದುವರೆಗೆ ನಡೆದ ಕಾರ್ಯಾಚರಣೆಯಲ್ಲಿ 207 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.