ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ನಿಂದ ಪ್ರತ್ಯೇಕ ಪಡೆ?

ಭಾನುವಾರ, 15 ಮೇ 2022 (10:20 IST)
ನವದೆಹಲಿ:  ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಲಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ವಿರುದ್ಧ ತನ್ನದೇ ಆದ ಪಡೆ ಸೃಷ್ಟಿಸುವ ಪ್ರಸ್ತಾಪವನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸುತ್ತಿದೆ. ದೇಶಾದ್ಯಂತ ಪ್ರತಿ ಬ್ಲಾಕ್‌ ಹಂತದಲ್ಲಿ ಸಂಘ ವಿರೋಧಿ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಆರ್‌ಎಸ್‌ಎಸ್‌ ಕಾರ್ಯಕರ್ತರ ತಂತ್ರವನ್ನು ನಿಷ್ಫಲಗೊಳಿಸಲು ಕಾಂಗ್ರೆಸ್‌ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
 
ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿ ಪಕ್ಷದ ಪುನರುತ್ಥಾನಕ್ಕೆ ಹಲವು ಅಂಶಗಳನ್ನು ಸೂಚಿಸಿದ್ದು, ಅದರಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಕಾರ್ಯಕರ್ತರ ಪಡೆ ಸೃಷ್ಟಿ ಅಂಶವೂ ಇದೆ.
ಇಂತಹ ಕಾರ್ಯಕರ್ತನಿಗೆ ಸ್ಥಳೀಯ ಭಾಷೆ ಗೊತ್ತಿರಬೇಕು. ಸಾಮಾಜಿಕ ಜಾಲತಾಣ ಬಳಕೆ, ಬೂತ್‌ ನಿರ್ವಹಣೆಯಲ್ಲಿ ಪರಿಣತಿ ಹೊಂದಿರಬೇಕು ಎಂದು ಸಮಿತಿ ಸಲಹೆ ಮಾಡಿದೆ.
 
ಇದೇ ವೇಳೆ, ಪಕ್ಷದ ಅರ್ಧದಷ್ಟು ಹುದ್ದೆಗಳನ್ನು ದಲಿತರು, ಬುಡಕಟ್ಟು ವರ್ಗ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ನೀಡಬೇಕು. ತೃತೀಯ ಲಿಂಗಿಗಳಿಗೂ ಸಾಕಷ್ಟು ಪ್ರಾತಿನಿಧ್ಯ ಕೊಡಬೇಕು. ಐದು ವರ್ಷಗಳ ಕಾಲ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ವಿಭಾಗ ಹಾಗೂ ಮಹಿಳಾ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದವರಿಗೆ ಪಕ್ಷದ ಪ್ರಮುಖ ಸಮಿತಿಗಳಲ್ಲಿ ಸ್ಥಾನ ಕೊಡಬೇಕು. ದೇಶದ ಜನಸಂಖ್ಯೆ, ಗುರುತು, ಅಲ್ಲಿನ ಸಮಸ್ಯೆಗಳು, ದಲಿತರು, ಬುಡಕಟ್ಟು ವರ್ಗ, ಒಬಿಸಿ ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕುರಿತು ಸರಣಿ ಸಮೀಕ್ಷೆಗಳನ್ನು ನಡೆಸಬೇಕು. ಈ ಅಧ್ಯಯನ ಒಂದು ತಿಂಗಳಲ್ಲಿ ನಡೆಯಬೇಕು. ಈ ಮಾಹಿತಿಯನ್ನು ಎಐಸಿಸಿ, ರಾಜ್ಯ ಹಾಗೂ ಜಿಲ್ಲಾ ಘಟಕಗಳು ಚುನಾವಣೆಗೆ ಬಳಸಬೇಕು ಎಂದು ಹೇಳಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ