ತೇಜಸ್ವಿ ಸೂರ್ಯ ಬಗ್ಗೆ ಅಚ್ಚರಿಯ ವಿಚಾರ ಹೇಳಿದ ಪತ್ನಿ: ಶಿವಶ್ರೀ ಎರಡೇ ತಿಂಗಳಲ್ಲಿ ಕನ್ನಡ ಕಲಿತಿದ್ದು ಹೇಗೆ

Krishnaveni K

ಶನಿವಾರ, 25 ಅಕ್ಟೋಬರ್ 2025 (10:29 IST)
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಪತಿ ತೇಜಸ್ವಿ ಸೂರ್ಯ ಬಗ್ಗೆ ತಮ್ಮ ವೃತ್ತಿ ಜೀವನದ ಬಗ್ಗೆ ಮತ್ತು ಕನ್ನಡ ಕಲಿತಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಡಾ ಪದ್ಮಿನಿ ಓಕ್ ಅವರ ಯೂ ಟ್ಯೂಬ್ ಪಾಡ್ ಕಾಸ್ಟ್ ನಲ್ಲಿ ಶಿವಶ್ರೀ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ಚಿಕ್ಕಂದಿನಿಂದಲೇ ಸಂಗೀತ, ನೃತ್ಯ ಅಭ್ಯಾಸ ಮಾಡಲು ತಮ್ಮ ತಂದೆ ಪ್ರೋತ್ಸಾಹ ನೀಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ತಂದೆಯ ಒತ್ತಾಯದಿಂದಲೇ ಸಂಗೀತದಲ್ಲಿ ಮುಂದೆ ಬಂದಿರುವುದಾಗಿ ಹೇಳಿದ್ದಾರೆ.

ಇನ್ನು ಮದುವೆ ಬಳಿಕ ತಮ್ಮ ವೃತ್ತಿ ಜೀವನದಲ್ಲಿ ಬದಲಾವಣೆಯಾಗಿದೆಯೇ ಎಂಬುದಕ್ಕೆ ಅವರು ಅಭ್ಯಾಸ ಇನ್ನಷ್ಟು ಹೆಚ್ಚಾಗಿದೆ ಎಂದಿದ್ದಾರೆ. ಮದುವೆ ಬಳಿಕ ಖಂಡಿತಾ ನನ್ನ ಜೀವನ ಬದಲಾಗಿದೆ. ಈಗ ಮುಂಚೆಗಿಂತ ಹೆಚ್ಚು ಸಂಗೀತ ಅಭ್ಯಾಸ ಮಾಡುತ್ತಿದ್ದೇನೆ. ಯಾಕೆಂದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ಸಂಗೀತ ಎಂದರೆ ಇಷ್ಟ. ಅವರು (ತೇಜಸ್ವಿ ಸೂರ್ಯ) ನನಗೆ ಯಾವತ್ತೂ ಪ್ರಾಕ್ಟೀಸ್ ಮಾಡು ಎಂದು ಹೇಳುತ್ತಲೇ ಇರುತ್ತಾರೆ. ನಾನು ಹಾಡುವಾಗ ಏನಾದರೂ ತಪ್ಪು ಮಾಡಿದರೆ ಇಲ್ಲಿ ತಪ್ಪು ಮಾಡಿದೆ ಎಂದು ಹೇಳುತ್ತಾರೆ. ನಾನು ಹಾಡುವುದನ್ನು ತುಂಬಾ ಇಷ್ಟಪಟ್ಟು ಕೇಳ್ತಾರೆ. ನನ್ನ ಅತ್ತೆ-ಮಾವ ಕೂಡಾ ಹಾಗೇನೇ. ಅವರಿಗೂ ಸಂಗೀತ ಎಂದರೆ ಇಷ್ಟ. ಹತ್ತಿರದಲ್ಲೇ ಕಾರ್ಯಕ್ರಮಗಳಿದ್ದರೆ ನನ್ನ ಕಾರ್ಯಕ್ರಮಗಳಿಗೆ ಅವರೇ ಬರ್ತಾರೆ. ಮನೆಯಲ್ಲಿ ನನಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿರುವುದರಿಂದ ಇನ್ನಷ್ಟು ಹೆಚ್ಚು ಅಭ್ಯಾಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಇನ್ನು ಪಕ್ಕಾ ತಮಿಳಿಗರಾಗಿದ್ದ ಶಿವಶ್ರೀ ಮದುವೆಯಾಗಿ ಎರಡೇ ತಿಂಗಳಿಗೆ ಅಚ್ಚ ಕನ್ನಡದಲ್ಲಿ ಮಾತನಾಡಲು ಶುರು ಮಾಡಿದ್ದರು. ಇದರ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ನನಗೆ ಮದುವೆಗೆ ಮೊದಲು ಸ್ವಲ್ಪವೂ ಕನ್ನಡ ಬರುತ್ತಿರಲಿಲ್ಲ. ಅರ್ಥವೂ ಆಗುತ್ತಿರಲಿಲ್ಲ. ಆದರೆ ನಂತರ ನಾನು ಯೂಟ್ಯೂಬ್ ಕ್ಲಾಸ್ ತೆಗೆದುಕೊಂಡು ಕನ್ನಡ ಕಲಿತೆ. ಅದು ನನಗೆ ತುಂಬಾ ಸಹಾಯ ಮಾಡಿತು. ನಮ್ಮ ಮನೆಯಲ್ಲಿ ಎಲ್ಲರೂ ನನಗೆ ಕನ್ನಡದಲ್ಲಿ ಮಾತನಾಡಲು ಹೇಳಿಕೊಡುತ್ತಾರೆ. ನಮ್ಮ ಅತ್ತೆ-ಮಾವನ ಬಳಿ ಇಂಗ್ಲಿಷ್ ನಲ್ಲೇ ಮಾತನಾಡಿ ಎಂದು ಹೇಳಲು ಆಗಲ್ಲ ಅಲ್ವಾ ಅದಕ್ಕೆ ಕನ್ನಡ ಕಲಿತುಕೊಂಡೆ. ಅವರೆಲ್ಲಾ ನನಗೆ ಸಹಾಯ ಮಾಡಿದರು. ಇದು ನನ್ನ ಸಂಗೀತಕ್ಕೂ ಸಹಾಯವಾಗಿದೆ. ಮೊದಲು ನನಗೆ ಕನ್ನಡ ಹಾಡುಗಳು ಅರ್ಥವಾಗುತ್ತಿರಲಿಲ್ಲ. ಆದರೆ ಈಗ ಸಾಹಿತ್ಯ ಅರ್ಥ ಮಾಡಿಕೊಂಡು ಹಾಡುತ್ತಿದ್ದೇನೆ. ಡಾ ರಾಜ್ ಕುಮಾರ್ ಅವರ ಹಾಡುಗಳನ್ನೂ ಹಾಡಿದ್ದು ಇದೆ’ ಎಂದಿದ್ದಾರೆ. ವಿಶೇಷವೆಂದರೆ ಈ ಸಂದರ್ಶನದ ಪೂರ್ತಿ ಅವರು ಕನ್ನಡದಲ್ಲೇ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ