ರಾಹುಲ್ ಗಾಂಧಿ ಸಾರ್ವಜನಿಕವಾಗಿ ಸುಳ್ಳು ಹೇಳ್ತಾರೆ: ಅಮಿತ್ ಶಾ

Krishnaveni K

ಶನಿವಾರ, 10 ಫೆಬ್ರವರಿ 2024 (14:38 IST)
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಹಸಿ ಸುಳ್ಳು ಹೇಳುವುದಕ್ಕೂ ಹಿಂಜರಿಯುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಭಾರತ್ ನ್ಯಾಯ್ ಜೋಡೋ ಯಾತ್ರೆಯಲ್ಲಿ ಪ್ರಧಾನಿ ಮೋದಿ ತಮ್ಮ ಜಾತಿ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಅವರು ಹುಟ್ಟಿನಿಂದಲೂ ಒಬಿಸಿ ವರ್ಗಕ್ಕೆ ಸೇರಿದವರಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಕಾನಮಿಕ್ ಟೈಮ್ಸ್ ನ ಗ್ಲೋಬಲ್ ಬ್ಯುಸಿನೆಸ್ ಸಮ್ಮೇಳನಲ್ಲಿ ಮಾತನಾಡಿದ ಅವರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ರಾಹುಲ್ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ‘ರಾಹುಲ್ ಗಾಂಧಿಗೆ ಒಂದು ಚಾಳಿಯಿದೆ. ಸಾರ್ವಜನಿಕವಾಗಿ ಸುಳ್ಳು ಹೇಳುವುದು ಮತ್ತು ಅದನ್ನೇ ಪುನರಾವರ್ತಿಸುವುದು. ಪ್ರಧಾನಿ ಮೋದಿಯವರ ಜಾತಿ ಬಗ್ಗೆ ಹೇಳುವುದಾದರೆ ಕಾಂಗ್ರೆಸ್ ಗೆ ಜಾತಿ ಮತ್ತು ವರ್ಗದ ನಡುವಿನ ವ್ಯತ್ಯಾಸವೇನೆಂದು ತಿಳಿದಂತೆ ಕಾಣುತ್ತಿಲ್ಲ. ಪಿಎಂ ಮೋದಿ ನಾನು ಒಬಿಸಿ ವರ್ಗಕ್ಕೆ ಸೇರಿದವನು ಎಂದಿದ್ದಾರೆಯೇ ಹೊರತು, ಒಬಿಸಿ ಜಾತಿ ಎಂದಿಲ್ಲ. ಬಹುಶಃ ರಾಹುಲ್ ಗಾಂಧಿಗೆ ಟೀಚರ್ ಈ ವಿಚಾರಗಳನ್ನೆಲ್ಲಾ ಕಲಿಸಿರಲ್ಲ. ಪ್ರಧಾನ ಮಂತ್ರಿಯವರ ಜಾತಿಯ ಬಗ್ಗೆ ಉಲ್ಲೇಖವಾಗುತ್ತಿರುವುದು ನಿಜಕ್ಕೂ ಖೇದಕರ’ ಎಂದಿದ್ದಾರೆ.

‘1994 ರಲ್ಲಿ ಮೋದಿಜಿಯವರ ಜಾತಿಯನ್ನು ಒಬಿಸಿ ವರ್ಗಕ್ಕೆ ಸೇರಿಸಲು ಅಂದಿನ ಕಾಂಗ್ರೆಸ್ ಸರ್ಕಾರ ಪ್ರಸ್ತಾವನೆ ಸಲ್ಲಸಿತ್ತು. ವಿಪರ್ಯಾಸವೆಂದರೆ ಆಗ ಮೋದಿಜಿ ಇನ್ನೂ ಒಂದು ಚುನಾವಣೆಯಲ್ಲಿ ಕೂಡಾ ಸ್ಪರ್ಧಿಸಿರಲಿಲ್ಲ. ಕೇವಲ ಕಾರ್ಯಕರ್ತನಾಗಿದ್ದರಷ್ಟೆ. 2000 ರಲ್ಲಿ ಮೋದಿಜಿಯವರ ಜಾತಿ ಒಬಿಸಿ ವರ್ಗಕ್ಕೆ ಸೇರ್ಪಡೆಯಾಯಿತು. ಆಗಲೂ ಮೋದಿ ಇ ಅಧಿಕಾರದಲ್ಲಿರಲಿಲ್ಲ’ ಎಂದಿದ್ದಾರೆ.

ಸತ್ಯವನ್ನು ತಿರುಚುವುದು, ಸುಳ್ಳನ್ನೇ ಸತ್ಯವಾಗಿಸುವುದು ಎಲ್ಲವೂ ಕಾಂಗ್ರೆಸ್ ಗೆ ಮೊದಲಿನಿಂದಲೂ ಇರುವ ಖಯಾಲಿ. ಅದು ಈಗಲೂ ಮುಂದುವರಿದಿದೆ ಎಂದು ಅಮಿತ್ ಶಾ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ