ಗುಜರಾತ್ ಸಿಎಂ: ಶಾ ಆಯ್ಕೆ ವಿಜಯ್ ರೂಪಾನಿ, ಅಂತಿಮ ನಿರ್ಧಾರ ಮೋದಿಯದ್ದು

ಬುಧವಾರ, 3 ಆಗಸ್ಟ್ 2016 (12:51 IST)
ಆನಂದಿ ಬೆನ್ ಅವರ ರಾಜೀನಾಮೆಯಿಂದ ತೆರವಾಗಿರುವ ಗುಜರಾತ್ ಸಿಎಂ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ದೇಶದಾದ್ಯಂತ ಮನೆ ಮಾಡಿದೆ. ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ, ಗುಜರಾತ್ ಸಂಪುಟ ದರ್ಜೆ ಸಚಿವ ನಿತಿನ್ ಪಟೇಲ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯ್ ರೂಪಾನಿ, ವಿಧಾನಸಭಾ ಸ್ಪೀಕರ್ ಗಣಪತಿ  ವಾಸವ್  ಮುಖ್ಯಮಂತ್ರಿ ಪದವಿಯ ರೇಸ್‌ನಲ್ಲಿದ್ದಾರೆ. ಆದರೆ ಮೂಲಗಳ ಪ್ರಕಾರ ವಿಜಯ್ ರೂಪಾನಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಯ್ಕೆಯಾಗಿದ್ದಾರೆ.  ಹೀಗಾಗಿ ಅವರೇ ಗುಜರಾತ್ ಸಿಎಂ ಆಗುವ ಲಕ್ಷಣಗಳು ದಟ್ಟವಾಗಿವೆ.

ಮುಖ್ಯಮಂತ್ರಿ ಆಯ್ಕೆ ಹೊಣೆಯನ್ನು ಪಕ್ಷದ ಸಂಸದೀಯ ಮಂಡಳಿಗೆ ನೀಡಲಾಗಿದ್ದು  ಈ ಸಂಬಂಧ ಪ್ರಧಾನಮಂತ್ರಿ ನಿವಾಸದಲ್ಲಿ ಇಂದು ಸಭೆ ನಡೆಯಲಿದೆ. ಆದರೆ ಪ್ರಧಾನಿ ಮೋದಿ ಒಪ್ಪಿಗೆಯ ಮೇರೆಗೆ ಸಿಎಂ ಆಯ್ಕೆ ಮಾಡಲಾಗುವುದು ಎಂದು ವರದಿಯಾಗಿದೆ.

ಪಟೇದಾರ್, ಚಳವಳಿ, ಸ್ಥಳೀಯ ಚುನಾವಣೆಗಳ ಸೋಲು, ಇತ್ತೀಚಿಗೆ ನಡೆದ ದಲಿತರ ಮೇಲಿನ ಹಲ್ಲೆ ಪ್ರಕರಣಗಳಿಂದ ಪಕ್ಷಕ್ಕಾಗಿರುವ ಹಿನ್ನಡೆಯನ್ನು ಮೆಟ್ಟಿ ನಿಂತು 2017ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರುವ ಸವಾಲನ್ನು ಸಮರ್ಥವಾಗಿ ಎದುರಿಸುವ ನಾಯಕನ ಆಯ್ಕೆಯಾಗಬೇಕಿದೆ.

ಕಳೆದ ಎರಡು ದಶಕಗಳಿಂದ ರಾಜ್ಯದಲ್ಲಿ ಹೊಂದಿರುವ ಅಧಿಕಾರವನ್ನು ಯಾವುದೇ ಪರಿಸ್ಥಿತಿಯಲ್ಲೂ ಕಳೆದುಕೊಳ್ಳಬಾರದು ಎಂಬ ನಿಲುವು ಪ್ರಧಾನಿಯವರದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ

ನವೆಂಬರ್ ತಿಂಗಳಲ್ಲಿ ತನಗೆ 75 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ಧಳಾಗಿದ್ದೇನೆ ಎಂದು ಸೋಮವಾರ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದ ಆನಂದಿ ಬೆನ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದರು.

ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆ ಕೋರಿ 2 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದೆ. ನವೆಂಬರ್ ತಿಂಗಳಿನಲ್ಲಿ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲು ಇದು ತುಂಬಾ ಸರಿಯಾದ ಸಮಯವಾಗಿದೆ.  ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಹೊಸ ನಾಯಕತ್ವ ವಹಿಸಿಕೊಳ್ಳುವವರಿಗೆ ಹೆಚ್ಚಿನ ಸಮಯಾವಕಾಶ ಮಾಡಿಕೊಡುತ್ತೇನೆ ಎಂದು ಆನಂದಿಬೆನ್ ಫೇಸ್‍ಬುಕ್‌ಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ