ನವದೆಹಲಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಇಂದು ಪುಣ್ಯಸ್ನಾನ ಮಾಡಲಿದ್ದಾರೆ. ಆದರೆ ಇದಕ್ಕೆ ಆಪ್ ಪಕ್ಷದಿಂದ ತಗಾದೆ ಎದುರಾಗಿದೆ.
ದೆಹಲಿಯಲ್ಲಿ ಈಗ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರ ಪ್ರಕ್ರಿಯೆ ಮುಗಿದಿದೆ. ಈ ಸಂದರ್ಭದಲ್ಲಿ ಮೋದಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಅವರು ರಾಜಕೀಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಆಪ್ ಆಕ್ಷೇಪವೆತ್ತಿದೆ.
ಇಂದು ಪ್ರಯಾಗ್ ರಾಜ್ ಗೆ ಬರಲಿರುವ ಪ್ರಧಾನಿ ಮೋದಿ ತ್ರಿವೇಣಿ ಸಂಗಮದಲ್ಲಿ ಸುಮಾರು 11 ಗಂಟೆಯ ವೇಳೆಗೆ ಪುಣ್ಯಸ್ನಾನ ಮಾಡಲಿದ್ದಾರೆ. ಈ ವೇಳೆ ಅವರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡುವ ನಿರೀಕ್ಷೆಯಿದೆ.
ಕುಂಭಮೇಳದಲ್ಲಿ ಇಂದು ಅಮೃತಸ್ನಾನವಿರಲಿದ್ದು, ಈ ವಿಶೇಷ ದಿನದಂದೇ ಮೋದಿ ಭೇಟಿ ನೀಡುತ್ತಿದ್ದಾರೆ. ಅರ್ಧಗಂಟೆ ಕುಂಭಮೇಳ ವೀಕ್ಷಣೆ ಮಾಡಿ ಸುಮಾರು 12 ಗಂಟೆಯ ಸುಮಾರಿಗೆ ಮೋದಿ ಅಲ್ಲಿಂದ ವಾಪಸ್ ಆಗಲಿದ್ದಾರೆ.