ವಾದ್ರಾ ಕಚೇರಿ ಮೇಲೆ ಇಡಿ ದಾಳಿ ಪ್ರಕರಣ; ಕೇಂದ್ರ ಸರ್ಕಾರದ ವಿರುದ್ಧ ಕಪಿಲ್ ಸಿಬಲ್ ವಾಗ್ದಾಳಿ
ಭಾನುವಾರ, 9 ಡಿಸೆಂಬರ್ 2018 (07:32 IST)
ನವದೆಹಲಿ : ವಾದ್ರಾ ಕಚೇರಿ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಇದೀಗ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕಪಿಲ್ ಸಿಬಲ್, ‘ರಾಬರ್ಟ್ ವಾದ್ರಾ ವಿರುದ್ಧ ಯಾವುದೇ ಎಫ್.ಐ.ಆರ್. ದಾಖಲಾಗಿಲ್ಲ. ಆದರೂ ಸತ್ಯಾಂಶದ ಬಗ್ಗೆ ಅಧಿಕಾರಿಗಳೂ ಏನೂ ತಿಳಿಸುತ್ತಿಲ್ಲ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ದರ್ಪ ತೋರಿಸುತ್ತಿದ್ದಾರೆ. ಇಡಿ ಬಿಜೆಪಿ ನಾಯಕರ ಕೈಗೊಂಬೆಯಾಗಿದೆ. ಇಡಿ ಅಧಿಕಾರಿಗಳು ಅನಾವಶ್ಯಕವಾಗಿ ತೊಂದರೆ ಕೊಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಜೈಲಿಗೆ ಕಳುಹಿಸುವ ಅಧಿಕಾರ ಪ್ರಧಾನಿ ಮೋದಿಗೆ ಇಲ್ಲ. ಅದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಪ್ರಧಾನಿ ಮೋದಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆಂಧ್ರ ತೆಲಂಗಾಣ, ಪ.ಬಂಗಾಳದಲ್ಲಿ ಅಧಿಕಾರ ದುರುಪಯೋಗವಾಗುತ್ತಿದೆ. ವಕೀಲ ಮನೋಜ್ ಕುಟುಂಬದವರಿಗೆ ಹಿಂಸೆ ನೀಡಲಾಗುತ್ತಿದೆ. ವಿನಾಕಾರಣ ರಾಬರ್ಟ್ ವಾದ್ರಾ ವಿರುದ್ಧ ತನಿಖೆ ಮಾಡಲಾಗುತ್ತದೆ. ಪದೇ ಪದೇ ವಾದ್ರಾರನ್ನು ಇಡಿ ಅಧಿಕಾರಿಗಳು ಟಾರ್ಗೆಟ್ ಮಾಡ್ತಿದ್ದಾರೆ’ ಎಂದು ಕಪಿಲ್ ಸಿಬಲ್ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.