ಪಂಜಾಬ್‌ನಲ್ಲಿ ಆಪ್ ಉದಯಿಸುತ್ತಿರುವುದನ್ನು ಒಪ್ಪಿದ ಬಾದಲ್

ಬುಧವಾರ, 17 ಆಗಸ್ಟ್ 2016 (17:56 IST)
ಪಂಜಾಬ್‌ನಲ್ಲಿ ಆಪ್ ಪ್ರವರ್ಧಮಾನಕ್ಕೆ ಬರುತ್ತಿದೆ ಎಂಬುದನ್ನು ನಿರಾಕರಿಸುತ್ತಲೇ ಬಂದಿದ್ದ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮಂಗಳವಾರ ಯುವ ಪಕ್ಷ ಆಪ್ ರಾಜ್ಯದಲ್ಲಿ ನಾಯಿಕೊಡೆಯಂತೆ ತಲೆ ಎತ್ತುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
 
ಗೋವಾವನ್ನು ಪೋರ್ಚುಗೀಸರ ಹಿಡಿತದಿಂದ ಬಿಡಿಸುವಾಗ ಸಾವನ್ನಪ್ಪಿದ ಕ್ರಾಂತಿಕಾರಿ ಕರ್ನಲ್ ಸಿಂಗ್ ಇಸ್ಸ್ರು ಅವರ ಹುತಾತ್ಮ ದಿನದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಂಜಾಬ್ ವಿರೋಧಿ, ಸಿಖ್ ವಿರೋಧಿ ಮತ್ತು ರೈತ ವಿರೋಧಿ ಎಂಬುದನ್ನು ಮತದಾರರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.  
 
ಈ ಎರಡು ಪಕ್ಷಗಳನ್ನು ಕುರುಡಾಗಿ ನಂಬಬೇಡಿ. ಇವೆರಡು ರಾಜ್ಯದ ಹಿತಾಸಕ್ತಿಗೆ ಹಾನಿಕಾರಕವಾಗಿದ್ದು, ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ ಎಂದು ಶಿರೋಮಣಿ ಅಕಾಲಿ ದಳದ ಪ್ರಧಾನರಾಗಿರುವ ಬಾದಲ್ ತಿಳಿಸಿದ್ದಾರೆ. 
 
ರಾಜ್ಯದಲ್ಲಿ ಹುಟ್ಟುತ್ತಿರುವ ಈ ಹೊಸ ಪಕ್ಷ ಪಂಜಾಬ್ ಜನರ ಬಗ್ಗೆ ಒಲವು ಹೊಂದಿಲ್ಲ. ದೆಹಲಿಯ ಆಪ್ ಸರ್ಕಾರ ಎಸ್‌ವೈಎಲ್‌ಗೆ ಸಂಬಂಧಿಸಿದಂತೆ ಸುಪ್ರೀಂನಲ್ಲಿ ಪಂಜಾಬ್ ಹಿತಾಸಕ್ತಿ ವಿರುದ್ಧ ನಿಂತಿದೆ ಎಂದು ಅವರು ಹೇಳಿದ್ದಾರೆ. 
 
ಪಂಜಾಬ್‌ನಲ್ಲಿ ಫೆಬ್ರವರಿ 2017ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಆಪ್ ಪ್ರವರ್ಧಮಾನಕ್ಕೆ ಬರುತ್ತಿರುವುದು ಆಡಳಿತಾರೂಢ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ  ಸವಾಲಾಗಿ ಪರಿಣಮಿಸಿದೆ.
 

ವೆಬ್ದುನಿಯಾವನ್ನು ಓದಿ