ಲಕ್ನೋ: ಅಣ್ಣ-ತಂಗಿಯ ಸಂಬಂಧ ಎಂದರೆ ನಮ್ಮ ದೇಶದಲ್ಲಿ ಅಷ್ಟೇ ಪಾವಿತ್ರ್ಯತೆ ಇದೆ. ಅವರ ಸಂಬಂಧ ಅಷ್ಟೇ ನಿಷ್ಕಲ್ಮಶ. ಆದರೆ ಇದೀಗ ದುಡ್ಡಿನ ಆಸೆಗೆ ಇಲ್ಲೊಬ್ಬ ಅಣ್ಣ-ತಂಗಿ ಸಂಬಂಧವನ್ನೇ ಬಲಿಕೊಟ್ಟಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಹಿಂದುಳಿದ ಜೋಡಿಗಳ ಸಾಮೂಹಿಕ ಮದುವೆ ಮಾಡಿಸಿ ನವಜೋಡಿಗೆ ಮನೆ ಸಾಮಾನು, 35 ಸಾವಿರ ರೂ. ನಗದು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು ಅಣ್ಣ-ತಂಗಿ ಮದುವೆಯ ನಾಟಕವಾಡಿದ್ದಾರೆ.
ಸರ್ಕಾರದ ಯೋಜನೆಯನ್ನು ಹೇಗಾದರೂ ಲಾಭಕ್ಕೆ ಬಳಸಿಕೊಳ‍್ಳಲು ಎಲ್ಲರೂ ಒಂದಿಲ್ಲೊಂದು ದಾರಿ ನೋಡಿಕೊಳ್ಳುತ್ತಾರೆ. ಆದರೆ ಈ ಅಣ್ಣ-ತಂಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಬಂಧದ ಪಾವಿತ್ರ್ಯತೆಯನ್ನೇ ಹಾಳು ಮಾಡಲು ಹೊರಟಿದ್ದಾರೆ. ಹಣದ ಆಸೆಗೆ ಬಿದ್ದು ಮದುವೆಯಾಗಲು ಹೊರಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ವಿಶೇಷವೆಂದರೆ ತಂಗಿಗೆ ಈ ಮೊದಲೇ ಮದುವೆಯಾಗಿತ್ತು. ಗಂಡ ಇನ್ನೊಂದು ಊರಿನಲ್ಲಿದ್ದ. ತಂಗಿಗೆ ಇನ್ನೊಂದು ವರನೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಮೊದಲೇ ಯೋಜನೆ ರೂಪಿಸಿದಂತೆ ವರ ಮಂಟಪಕ್ಕೆ ಬರಲೇ ಇಲ್ಲ. ಬಳಿಕ ಅಲ್ಲೇ ಇದ್ದ ಅಣ್ಣನ ಮನವೊಲಿಸುವ ನಾಟಕವಾಡಿ ಮದುವೆ ಮಾಡಿಸಿದ್ದಾರೆ. ಇವರ ಈ ನಾಟಕ ಇದೀಗ ಬಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ.