ಅಂತರಾಷ್ಟ್ರೀಯ ಯೋಗ ದಿನದ ಯಶಸ್ಸಿಗೆ ಪ್ರಧಾನಿ ಮೋದಿಯನ್ನು ಶ್ಲಾಘಿಸಿರುವ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ, ಅದರ ಜೊತೆಗೆ ಯೋಗದಿಂದ ಜಗತ್ತಿನ 130 ರಾಷ್ಟ್ರಗಳೂ ಬಾಗುವಂತೆ ಮಾಡಿದ ಮೋದಿ ಅವರು ಪಾಕಿಸ್ತಾನಕ್ಕೆ ಶವಾಸನ ಮಾಡಿಸುವುದು ಯಾವಾಗ ಎಂದು ಕಿಚಾಯಿಸಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಯೋಗ ದಿನದ ಸಫಲತೆಯನ್ನು ಹೊಗಳಿದ ಸೇನೆ, ಹಣದುಬ್ಬರ, ಭೃಷ್ಟಾಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸಿದೆ. ಜತೆಗೆ ಪಾಕಿಸ್ತಾನ್ ವಿರುದ್ಧವೂ ಕಿಡಿಕಾರಿದೆ.
ನೇರೆರಾಷ್ಟ್ರದ ಬಗ್ಗೆ ಮೋದಿ ಅವರು ಅನುಸರಿಸಿರುವ ನೀತಿ ವಿರುದ್ಧ ಸವಾಲೆಸೆದಿರುವ ಸೇನೆ, ಪಾಕಿಸ್ತಾನಕ್ಕೆ ಸದಾ ಶವಾಸನ ಯೋಗವೇ ಅತ್ಯುತ್ತಮವಾದುದು ಎಂದಿದೆ. ನರೇಂದ್ರಾಸನ ಶೀರ್ಷಿಕೆಯಲ್ಲಿ ಬಂದಿರುವ ಸಂಪಾದಕೀಯದಲ್ಲಿ , ಪ್ರಧಾನಿ ಯೋಗವನ್ನು ವಿಶ್ವದಾದ್ಯಂತ ಕೊಂಡೊಯ್ದರು ಮತ್ತು ಲೋಕಪ್ರಿಯಗೊಳಿಸಿದರು. ಅವರ ಪ್ರಯತ್ನದಿಂದಲೇ ಜಗತ್ತಿನ 130 ರಾಷ್ಟ್ರಗಳಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ ಎಂದು ಹೊಗಳಿದೆ. ಜತೆಗೆ ಅದೇ ಲೇಖನದ ಮುಂದಿನ ಸಾಲಿನಲ್ಲಿ ನಮ್ಮನ್ನು ಕಾಡುತ್ತಿರುವ ಹಣದುಬ್ಬರಕ್ಕೆ ಮತ್ತು ಭ್ರಷ್ಟಾಚಾರದಂತಹ ವೇದನೆಗೆ ಯೋಗ ಪರಿಹಾರ ನೀಡುವುದೇ ಎಂದು ಮೋದಿಯರನ್ನು ಪ್ರಶ್ನಿಸಿದೆ.
ಎಂದಿನ ಶೈಲಿಯಲ್ಲಿ ಪಾಕಿಸ್ತಾನದ ಮೇಲೆ ಸವಾರಿ ಮಾಡಿರುವ ಸೇನೆ, ಪಾಕಿಸ್ತಾನಕ್ಕೆ ‘ಶವಾಸನ’ದ ಸ್ಥಿತಿ ತರುವಂತ ಯೋಗ ಅಂದರೆ ಕೇವಲ ಶಸ್ತ್ರ ಬಲ. ಶವಾಸನವೇ ಅವರಿಗೆ ಯೋಗ್ಯ. ಅವರಿಗೆ ಯಾವಾಗ ಶವಾಸನ ಮಾಡಿಸುತ್ತೀರಿ? ಎಂದು ಮೋದಿ ಅವರನ್ನು ಪ್ರಶ್ನಿಸಿದೆ.