ರಾಷ್ಟ್ರಪತಿಗೆ ಮುರ್ಮಾಜಿ, ಮಾಜಿ ರಾಷ್ಟ್ರಪತಿಗೆ ಕೊವಿಡ್ ಜೀ ಎಂದ ಮಲ್ಲಿಕಾರ್ಜುನ ಖರ್ಗೆ

Krishnaveni K

ಬುಧವಾರ, 9 ಜುಲೈ 2025 (09:26 IST)
ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮುರ್ಮಾಜಿ, ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರನ್ನು ಕೊವಿಡ್ ಜಿ ಎಂದು ಮಲ್ಲಿಕಾರ್ಜುನ ಖರ್ಗೆ ಎಡವಟ್ಟು ಮಾಡಿಕೊಂಡು ಭಾರೀ ಆಕ್ರೋಶ ಕೇಳಿಬಂದಿದೆ.
 

ಛತ್ತೀಸ್ ಘಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಖರ್ಗೆ ಈ ಎಡವಟ್ಟು ಮಾಡಿಕೊಂಡಿದ್ದರು. ಈ ಮೂಲಕ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳಾ ರಾಷ್ಟ್ರಪತಿಗಳನ್ನು  ಖರ್ಗೆ ಅವಮಾನಿಸಿದ್ದಾರೆ. ಹೀಗಾಗಿ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ರಾಷ್ಟ್ರಪತಿಗಳ ಹುದ್ದೆ ಎನ್ನುವುದು ಅತ್ಯಂತ ಗೌರವಯುತ ಹುದ್ದೆಯಾಗಿದೆ. ಆದರೆ ಅವರ ಹೆಸರನ್ನೇ ತಪ್ಪಾಗಿ ಉಚ್ಚರಿಸಿರುವ ಮಲ್ಲಿಕಾರ್ಜುನ ಖರ್ಗೆ ಸೋಷಿಯಲ್ ಮೀಡಿಯಾದಲ್ಲೂ ಟ್ರೋಲ್ ಆಗಿದ್ದಾರೆ. ಬಿಜೆಪಿ ದಲಿತ ರಾಷ್ಟ್ರಪತಿಗಳನ್ನು ಆಯ್ಕೆ ಮಾಡಿರುವುದರ ಹಿಂದಿನ ಅಸಲಿ ಉದ್ದೇಶವೇನು ಎಂದು ವಾಗ್ದಾಳಿ ನಡೆಸುತ್ತಿದ್ದ ಖರ್ಗೆ ಬಿಜೆಪಿಯವರು ನಾವು ಮುರ್ಮಾಜಿಯವರನ್ನು ರಾಷ್ಟ್ರಪತಿ ಮಾಡಿದ್ದೇವೆ, ಕೊವಿಡ್ ಜಿ ಅವರನ್ನು ಮಾಡಿದ್ದೇವೆ ಎನ್ನುತ್ತಾರೆ. ಯಾಕೆ ಮಾಡಿದ್ರು? ದೇಶದ ಅರಣ್ಯ ಪ್ರದೇಶ, ಸಂಪತ್ತು ಕೊಳ್ಳೆ ಹೊಡೆಯಲಾ ಎಂದು ಪ್ರಶ್ನೆ ಮಾಡಿದ್ದಾರೆ.

ತಪ್ಪು ಅರಿವಾದ ತಕ್ಷಣ ಖರ್ಗೆ ತಿದ್ದುಕೊಂಡು ಹೇಳಿದ್ದರು. ಹಾಗಿದ್ದರೂ ಇದನ್ನು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಿಬಿಟ್ಟಿದ್ದು ವಾಗ್ದಾಳಿ ನಡಸಿದೆ. ಈ ಮೂಲಕ ಖರ್ಗೆ ದಲಿತ ರಾಷ್ಟ್ರಪತಿಗಳನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ