ನವದೆಹಲಿ: ಭಯೋತ್ಪಾದನೆ ವಿರುದ್ಧ ಸರ್ವಪಕ್ಷಗಳ ನಿಯೋಗ ರಚನೆ ಮಾಡಲು ಕಾಂಗ್ರೆಸ್ ತಮ್ಮ ಪಕ್ಷದಿಂದ ನೀಡಿದ್ದ ನಾಲ್ಕು ಸದಸ್ಯರ ಹೆಸರು ಕೈ ಬಿಟ್ಟು ಕೇಂದ್ರ ಸರ್ಕಾರ ಶಶಿ ತರೂರ್ ರನ್ನು ಆಯ್ಕೆ ಮಾಡಿದೆ.
ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಕೇಂದ್ರ ಸರ್ಕಾರ ಸರ್ವ ಪಕ್ಷಗಳ ನಿಯೋಗ ರಚಿಸಿದೆ. ಈ ನಿಯೋಗದಲ್ಲಿ ಎಲ್ಲಾ ಪ್ರಮುಖ ಪಕ್ಷಗಳ ಸದಸ್ಯರಿದ್ದಾರೆ. ಇದಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಾಲ್ವರು ಹೆಸರಿನ ಪಟ್ಟಿ ನೀಡಿತ್ತು.
ಆದರೆ ಕೇಂದ್ರ ಸರ್ಕಾರ ಈ ನಾಲ್ವರ ಹೆಸರು ಬಿಟ್ಟು ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆದು ಮೋದಿ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ರನ್ನು ಆಯ್ಕೆ ಮಾಡಿದೆ. ಅವರು ಈ ನಿಯೋಗದ ಮುಖ್ಯಸ್ಥರಾಗಿರುತ್ತಾರೆ ಎನ್ನುವುದು ವಿಶೇಷ.
ಕಾಂಗ್ರೆಸ್ ತನ್ನ ಪಕ್ಷದ ವತಿಯಿಂದ ಆನಂದ್ ಶರ್ಮಾ, ಗೌರವ್ ಗೊಗೊಯ್, ಡಾ ಸಯೀದ್ ನಾಸಿರ್ ಹುಸೇನ್ ಮತ್ತು ರಾಜ್ ಬ್ರಾರ್ ಹೆಸರನ್ನು ಮಾತ್ರ ಸೂಚಿಸಿತ್ತು. ಆದರೆ ಈ ನಾಲ್ವರ ಹೆಸರನ್ನೂ ತಿರಸ್ಕರಿಸಿ ಶಶಿ ತರೂರ್ ಗೆ ಅವಕಾಶ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಶಶಿ ತರೂರ್ ಅಲ್ಲದೆ, ಸಂಸದ ಒವೈಸಿ, ಕನ್ನಿಮೊಳಿ, ಸುಪ್ರಿಯಾ ಸುಳೆ ಸೇರಿದಂತೆ ವಿವಿಧ ಪಕ್ಷದ ನಾಯಕರು ಈ ನಿಯೋಗದ ಸದಸ್ಯರಾಗಿದ್ದಾರೆ.