ನವದೆಹಲಿ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊನೆಗೂ ಬರ ಪರಿಹಾರ ಬಂದಿದ್ದು 3,454 ಕೋಟಿ ರೂ. ಬಿಡುಗಡೆ ಮಾಡಿದೆ. ಕಳೆದ ಸೆಪ್ಟೆಂಬರ್ ನಲ್ಲಿ ರಾಜ್ಯ ಸರ್ಕಾರ ಬರ ಪರಿಹಾರ ಕೇಳಿತ್ತು.
ರಾಜ್ಯ ಸರ್ಕಾರ ಕಳೆದ ವರ್ಷವೇ 18,174 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟಿತ್ತು. ಆದರೆ ಇದುವರೆಗೆ ನೀಡಿಲ್ಲ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಚಾಟಿ ಬೀಸುತ್ತಲೇ ಇತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ ಗೂ ಮೊರೆ ಹೋಗಿತ್ತು. ಕಳೆದ ತಿಂಗಳು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆಯನ್ನೂ ನಡೆಸಿತ್ತು.
ಇದೀಗ ಸುಪ್ರೀಂಕೋರ್ಟ್ ಸೂಚನೆ ನಂತರ ಕೇಂದ್ರ 3,454 ಕೋಟಿ ರೂ. ಬರ ಪರಿಹಾರ ನೀಡಿದೆ. ಅತ್ತ ನೆರೆಯ ತಮಿಳುನಾಡಿಗೆ 275 ಕೋಟಿ ರೂ. ನೆರೆ ಪರಿಹಾರ ನೀಡಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವ ಕೃಷ್ಣ ಭೈರೇಗೌಡ ಪ್ರಧಾನಿ ಮೋದಿ, ವಿತ್ತ ಸಚಿವರನ್ನು ಭೇಟಿ ಮಾಡಿ ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದರು. 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿದೆ. ಇದರಿಂದ 48.19 ಹೆಕ್ಟೇರ್ ಬೆಳೆ ನಾಶವಾಗಿದೆ. ಹೀಗಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.
ಆದರೆ ಕೇಂದ್ರ ಇದುವರೆಗೆ ನೀಡಿರಲಿಲ್ಲ. ಇದಾದ ಬಳಿಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಕೊಡಿಸುವಂತೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ಸುಪ್ರೀಂ ಕೋರ್ಟ್ ಪರಿಹಾರ ನೀಡಲು ಸೂಚಿಸಿತ್ತು. ಕೇಂದ್ರ ಸರ್ಕಾರ ಸೋಮವಾರದೊಳಗಾಗಿ ಪರಿಹಾರ ಕೊಡುವುದಾಗಿ ಕೋರ್ಟ್ ನಲ್ಲಿ ಒಪ್ಪಿಕೊಂಡಿತ್ತು. ಇದೀಗ ಪರಿಹಾರ ಹಣ ಸಂದಾಯವಾಗಿದೆ.
ಆದರೆ ಇದೀಗ ಕೇಳಿದಷ್ಟು ಪರಿಹಾರ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮತ್ತೆ ರಾಜ್ಯ ಸರ್ಕಾರ ಆಕ್ರೋಶ ವ್ಯಕ್ತಪಡಿಸುವ ಸಾಧ‍್ಯತೆಯಿದೆ. ಹಾಗಿದ್ದರೂ ಚುನಾವಣೆ ಮುಗಿಯವ ಒಳಗಾಗಿ ಪರಿಹಾರ ಸಿಕ್ಕಿದೆ.