ಬೆಂಗಳೂರು ಗ್ರಾಮಾಂತರದಲ್ಲಿ ಚುನಾವಣೆ ಅಕ್ರಮವಾಗಿತ್ತು ಎಂದ ಡಿಕೆ ಶಿವಕುಮಾರ್ ಗೆ ನೆಟ್ಟಿಗರ ಟಾಂಗ್

Krishnaveni K

ಶುಕ್ರವಾರ, 25 ಜುಲೈ 2025 (10:21 IST)
ಬೆಂಗಳೂರು: ರಾಹುಲ್ ಗಾಂಧಿ ಹೇಳಿದ್ದು ಕರೆಕ್ಟ್, ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದ ಡಿಸಿಎಂ ಡಿಕೆ ಶಿವಕುಮಾರ್ ಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಸ್ಪರ್ಧಿಸಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಖ್ಯಾತ ಹೃದ್ರೋಗ ತಜ್ಞ, ಬಡವರ ಬಂಧು ಎಂದೇ ಕರೆಯಿಸಿಕೊಂಡಿದ್ದ ಡಾ ಸಿಎನ್ ಮಂಜುನಾಥ್ ಸ್ಪರ್ಧಿಸಿದ್ದರು.

ಡಿಕೆ ಸುರೇಶ್ ಆಗಲೇ ಎರಡು ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಹೀಗಾಗಿ ಕಾಂಗ್ರೆಸ್ ಗೆ ಈ ಕ್ಷೇತ್ರ ಗೆಲ್ಲುವ ವಿಶ್ವಾಸವಿತ್ತು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ ಸಿಎನ್ ಮಂಜುನಾಥ್ ರಾಜಕೀಯದ ಹೊರತಾಗಿಯೂ ತಮ್ಮ ವೃತ್ತಿಯಿಂದ ಜನರ ಪ್ರೀತಿ ಗಳಿಸಿದ್ದರು. ಕೊನೆಗೆ ಮಂಜುನಾಥ್ ಅವರೇ ಗೆಲುವು ಸಾಧಿಸಿದ್ದರು. ಇದು ಡಿಕೆಶಿಗೆ ಪ್ರತಿಷ್ಠೆಯ ಕಣವಾಗಿತ್ತು. ಸಹೋದರನ ಸೋಲು ಡಿಕೆಶಿಗೆ ಹಿನ್ನಡೆ ತಂದಿತ್ತು.

ಇದೀಗ ರಾಹುಲ್ ಗಾಂಧಿ ಸಂಸತ್ ಭವನದ ಮುಂದೆ ಮಾತನಾಡುವಾಗ ಕರ್ನಾಟಕದಲ್ಲೂ ಲೋಕಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿತ್ತು ಎಂದಿದ್ದರು. ಅವರ ಹೇಳಿಕೆ ಸಮರ್ಥಿಸಿದ್ದ ಡಿಕೆಶಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮವಾಗಿದೆ ಎಂದಿದ್ದಾರೆ.

ಇದಕ್ಕೆ ನೆಟ್ಟಿಗರು ಭಾರೀ ಟ್ರೋಲ್ ಮಾಡಿದ್ದಾರೆ. ಹಾಗಿದ್ದರೆ ಕಳೆದ ಎರಡೂವರೆ ವರ್ಷಗಳಿಂದ ನೀವೇನು ನಿದ್ರೆ ಮಾಡ್ತಿದ್ರಾ? ಡಾ ಸಿಎನ್ ಮಂಜುನಾಥ್ ರಂತಹ ಸಾಧ್ವಿ, ಮೇರು ವ್ಯಕ್ತಿತ್ವದ ವ್ಯಕ್ತಿ ಮೊದಲ ಬಾರಿಗೆ ರಾಜಕೀಯಕ್ಕೆ ಕಾಲಿಟ್ಟವರು ಚೀಟಿಂಗ್ ಮಾಡಿ ಗೆದ್ದರು ಎಂದರೆ ಅದನ್ನು ನಂಬಕ್ಕಾಗುತ್ತಾ? ಬೇರೆ ಯಾವ ಕ್ಷೇತ್ರದ ಬಗ್ಗೆ  ಹೇಳಿದ್ರೂ ನಂಬ್ತಿದ್ದೆವು. ಆದರೆ ಸಿಎನ್ ಮಂಜುನಾಥ್ ಬಗ್ಗೆ ಹಾಗೆ ಹೇಳಿದರೆ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗಿದ್ದರೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲವೂ ಸರಿಯಿತ್ತಾ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ