ದೇಶದ್ರೋಹ ಸೆಕ್ಷನ್ ಪರಾಮರ್ಶೆ: ಕೇಂದ್ರ ಯು ಟರ್ನ್‌

ಸೋಮವಾರ, 9 ಮೇ 2022 (17:02 IST)
ಭಾರತೀಯ ದಂಡ ಸಂಹಿತೆ ಸೆಕ್ಷನ್ 124A ಯನ್ನು (ದೇಶದ್ರೋಹ ಕಾನೂನನ್ನು) ಮರುಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಮಾನವ ಹಕ್ಕುಗಳ ಕಾಳಜಿ ಸೇರಿದಂತೆ (ದೇಶದ್ರೋಹ) ಕಾನೂನಿಗೆ ಸಂಬಂಧಿಸಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಬಗ್ಗೆ ಸರ್ಕಾರವು ತಿಳಿದಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸರ್ಕಾರ ಹೇಳಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಮತ್ತು ಕಾನೂನನ್ನು ಮರುಪರಿಶೀಲಿಸಲು ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
“ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿಸಲಾದ ಸರ್ಕಾರದ ಬಗ್ಗೆ ದ್ವೇಷ ಅಥವಾ ತಿರಸ್ಕಾರವನ್ನು ತರಲು ಪ್ರಯತ್ನಿಸುವ ಅಥವಾ ಪ್ರಚೋದಿಸುವ ಅಥವಾ (ಸರ್ಕಾರದ ವಿರುದ್ಧ) ಅಸಮಾಧಾನವನ್ನು ಪ್ರಚೋದಿಸಲು ಪ್ರಯತ್ನಿಸುವುದನ್ನು ʼದೇಶದ್ರೋಹದ ಅಪರಾಧʼವನ್ನು ಎಸಗಿದ್ದಾರೆ ಎಂದು ಪರಿಗಣಿಸಬಹುದು” ಎಂದು ಸೆಕ್ಷನ್‌ 124ಎ ಹೇಳುತ್ತದೆ..
ಆದರೆ, ಈ ಕಾನೂನು ದುರುಪಯೋಗವಾಗಿರುವುದರಿಂದ ಅದನ್ನು ತೆಗೆದು ಹಾಕಬೇಕು ಎಂದು ವಾದಿಸಿ ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕೀಯ ಮುಖಂಡರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಶನಿವಾರ, ಕೇಂದ್ರವು ದೇಶದ್ರೋಹ ಕಾನೂನನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿತ್ತು.
ಸುಪ್ರೀಂ ಕೋರ್ಟ್‌ಗೆ ಲಿಖಿತ ಸಲ್ಲಿಕೆ ನೀಡಿದ್ದ ಸರ್ಕಾರವು, ಸೆಕ್ಷನ್ 124 ಎ ಅನ್ನು ಪರಿಶೀಲಿಸಲು ಸಾಧ್ಯವಿಲ್ಲ, ಏಕೆಂದರೆ ಈಗಾಗಲೇ 1962 ರ ತೀರ್ಪಿನಲ್ಲಿ ಅದನ್ನು ಸಮರ್ಥಿಸಿದೆ ಎಂದು ಕೇದಾರನಾಥ್ ಸಿಂಗ್ ಮತ್ತು ಬಿಹಾರ ರಾಜ್ಯ ನಡುವಿನ ಪ್ರಕರಣದಲ್ಲಿ ನ್ಯಾಯಾಲಯವು ದೇಶದ್ರೋಹ ಕಾನೂನನ್ನು ಎತ್ತಿಹಿಡಿಯುವ ತೀರ್ಪು ನೀಡಿದ್ದನ್ನು ಕೇಂದ್ರ ಉಲ್ಲೇಖಿಸಿ ಸೆಕ್ಷನ್ 124 ಎ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿತ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ