59ರಲ್ಲಿ 'ಐವಿಎಫ್' ಮೂಲಕ ಮಗುವಿಗೆ ಜನನ: ಮೂಸೆವಾಲ ಪೋಷಕರಲ್ಲಿ ವರದಿ ಕೇಳಿದ ಸರ್ಕಾರ

Sampriya

ಬುಧವಾರ, 20 ಮಾರ್ಚ್ 2024 (15:00 IST)
ಮುಂಬೈ: ಪಂಜಾಬಿ ಖ್ಯಾತ ಗಾಯಕ ಸಿದ್ದು ಮೂಸೆವಾಲ ಅವರ ಪೋಷಕರು ಎರಡನೇ ಮಗುವನ್ನು ಬರಮಾಡಿಕೊಂಡ ಬೆನ್ನಲ್ಲೇ ಸರ್ಕಾರದಿಂದ ಸಂಕಷ್ಟ ಎದುರಾಗಿದೆ.  ಮಾರ್ಚ್‌ 18ರಂದು ಸಿದ್ದು ಮೂಸೆವಾಲ ತಾಯಿ ಚರಣ್ ಕೌರ್(58) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸದ ವಿಷಯವನ್ನು ಸಿದ್ದು ತಂದೆ ಬಲ್ಕೌರ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 
 
ಇದೀಗ  ಪಂಜಾಬ್ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಐವಿಎಫ್ ತಂತ್ರಜ್ಞಾನದ ಮೂಲಕ ಜನಿಸಿದ ಶಿಶುಗಳ ಕಾನೂನಿಗೆ ಸಂಬಂಧಿಸಿದಂತೆ ವರದಿಯನ್ನು ಕೇಳಿದೆ. ಇದು ಸಿಧು ಮೂಸೆವಾಲಾ ಅವರ ತಾಯಿ ಐವಿಎಫ್ ಚಿಕಿತ್ಸೆ ಮೂಲಕ ಮಗು ಮಾಡಿಕೊಂಡ ನಂತರದ ಬೆಳವಣಿಗೆಯಾಗಿದೆ. 
 
ಮೂಸ್ ವಾಲಾ ಅವರ ತಾಯಿ ಚರಣ್ ಕೌರ್ ಅವರು 58 ನೇ ವಯಸ್ಸಿನಲ್ಲಿ ಐವಿಎಫ್ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಮಗು ಮಾಡಿಕೊಂಡಿದ್ದರು ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. 
 
ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ, 2021 ರ ವಿಭಾಗ 21(g) ಅಡಿಯಲ್ಲಿ, ART ಸೇವೆಗಳ ಅಡಿಯಲ್ಲಿ ಹೋಗುವ ಮಹಿಳೆಗೆ ವಯಸ್ಸಿನ ಮಿತಿಯನ್ನು 21-50 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಆದ್ದರಿಂದ, ಈ ವಿಷಯವನ್ನು ಪರಿಶೀಲಿಸಲು ಮತ್ತು ಎಆರ್‌ಟಿ (ನಿಯಂತ್ರಣ) ಕಾಯಿದೆ, 2021 ರ ಪ್ರಕಾರ ಈ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳ ವರದಿಯನ್ನು ಈ ಇಲಾಖೆಗೆ ಸಲ್ಲಿಸಲು ನಿಮ್ಮನ್ನು ವಿನಂತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಪತ್ರದಲ್ಲಿ ತಿಳಿಸಿದೆ.
 
ಈ ಸಂಬಂಧ ಸಿಧು ಮೂಸೆವಾಲಾ ತಂದೆ ಬಲ್ಕೌರ್ ಸಿಂಗ್, ಮಗುವಿನ ಸಂಬಂಧ ಪಂಜಾಬ್ ಸರ್ಕಾರ ನಮಗೆ ಕಿರುಕುಳವನ್ನು ನೀಡುತ್ತಿದೆ.  ವಾಹೆಗುರು ಅವರ ಆಶೀರ್ವಾದದಿಂದ ನಾವು ನಮ್ಮ ಶುಭದೀಪ್ (ಸಿದ್ದು ಮೂಸೆವಾಲ) ಅವರನ್ನು ಮರಳಿ ಪಡೆದಿದ್ದೇವೆ. ಆದರೆ, ಮಗುವಿನ ದಾಖಲೆಗಳನ್ನು ನೀಡುವಂತೆ ಸರ್ಕಾರ ಬೆಳಗ್ಗೆಯಿಂದ ನನಗೆ ಕಿರುಕುಳ ನೀಡುತ್ತಿದೆ. ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಬೇಕೆಂದು ನಮ್ಮಲ್ಲಿ ಕೇಳಿಕೊಳ್ಳುತ್ತಿದ್ದಾರೆಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ