ನವದೆಹಲಿ: ಅಬಕಾರಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಜೈಲಿನಲ್ಲಿ ವಿಶೇಷ ಆಹಾರ ನೀಡಲಾಗುತ್ತಿದೆ.
ಮೊನ್ನೆಯಷ್ಟೇ ಇಡಿ ಅಧಿಕಾರಿಗಳು ಸಿಎಂ ಕೇಜ್ರಿವಾಲ್ ರನ್ನು ಬಂಧಿಸಿದ್ದರು. 100 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಅವರ ಮೇಲಿದೆ. ಇದೀಗ ಕೇಜ್ರಿವಾಲ್ ತಮ್ಮ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಜೈಲಿನಿಂದಲೇ ಅವರು ಮುಖ್ಯಮಂತ್ರಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಸೂಕ್ತ ಔಷಧಿ ಪೂರೈಸಲು ನ್ಯಾಯಾಲಯ ಇಡಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. 6 ದಿನಗಳ ಕಾಲ ಇಡಿ ವಶದಲ್ಲಿರುವಾಗ ಅವರಿಗೆ ಸೂಕ್ತ ಊಟ, ಔಷಧಿ ಪೂರೈಸಬೇಕು. ಇಲ್ಲದೇ ಹೋದರೆ ಮನೆಯಿಂದ ಊಟ ಪೂರೈಸಲು ಅವಕಾಶ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಇದಲ್ಲದೆ, ಕೇಜ್ರಿವಾಲ್ ಪತ್ನಿ ಸುನಿತಾ, ಆಪ್ತ ಕಾರ್ಯದರ್ಶಿ ಭಿಭವ್ ಕುಮಾರ್ ಭೇಟಿಗೆ ಸಂಜೆ 6 ರಿಂದ 7 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜೊತೆಗೆ ಇಬ್ಬರು ವಕೀಲರ ಭೇಟಿಗೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಅವರ ಬಂಧನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ.