ಲಕ್ನೋ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳಪೆ ಪ್ರದರ್ಶನದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ವಿಐಪಿ ಸಂಸ್ಕೃತಿ ಬಿಟ್ಟು ಕೆಲಸ ಮಾಡುವಂತೆ ಸಚಿವರಿಗೆ ತಾಕೀತು ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಫಲಿತಾಂಶ ಬಿಜೆಪಿಗೆ ಭಾರೀ ಹೊಡೆತ ನೀಡಿತ್ತು. ಒಂದು ವೇಳೆ ಉತ್ತರ ಪ್ರದೇಶದಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬಂದಿದ್ದರೆ ಬಿಜೆಪಿ ಬಹುಮತ ಸಾಧಿಸುತ್ತಿತ್ತು. ಆದರೆ ಉತ್ತರ ಪ್ರದೇಶ ಬಿಜೆಪಿಗೆ ಕೈ ಕೊಟ್ಟಿತ್ತು. ಇದರ ಬೆನ್ನಲ್ಲೇ ಯೋಗಿ ಇಂತಹದ್ದೊಂದು ಕರೆ ನೀಡಿದ್ದಾರೆ.
ಎಲ್ಲರೂ ವಿಐಪಿ ಸಂಸ್ಕೃತಿ ಬಿಟ್ಟು ಜನರೊಂದಿಗೆ ಬೆರೆತು ಕೆಲಸ ಮಾಡಬೇಕು. ಜನರಿಗೆ ಜನಪ್ರತಿನಿಧಿಗಳು ವಿಐಪಿಗಳು ಎಂಬ ಭಾವ ಬರದಂತೆ ನೋಡಿಕೊಳ್ಳಬೇಕು. ಸಂವಾದ, ಸಮನ್ವಯತೆ ಮತ್ತು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು ಎಂದು ತಮ್ಮ ಸಂಪುಟದ ಸಚಿವರಿಗೆ ಸಲಹೆ ನೀಡಿದ್ದಾರೆ.
ಸರ್ಕಾರ ಎನ್ನುವುದು ಜನರಿಗಾಗಿ ಇರುವ ಸಂಸ್ಥೆ. ಸಾರ್ವಜನಿಕರ ಪ್ರತಿಕ್ರಿಯೆಗಳು ನಮ್ಮ ಆಡಳಿತ ವೈಖರಿಯ ಮೌಲ್ಯಮಾಪನವಾಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೂ ಪರಿಹಾರ ಸಿಗುವಂತಾಗಬೇಕು ಎಂದು ಯೋಗಿ ಕರೆ ನೀಡಿದ್ದಾರೆ.