ಬಾಬಾ ಸಿದ್ದಿಕ್‌ನಂತೆ ಕೊಲ್ಲುವುದಾಗಿ ಸಿಎಂ ಯೋಗಿಗೆ ಬೆದರಿಕೆ: ರಾಜೀನಾಮೆಗೆ 10 ದಿನಗಳ ಗಡುವು

Sampriya

ಭಾನುವಾರ, 3 ನವೆಂಬರ್ 2024 (11:10 IST)
Photo Courtesy X
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲೆ ಮಾಡುತ್ತೇವೆ ಎಂಬ ಬೆದರಿಕೆ ಕರೆಯನ್ನು ಮುಂಬೈ ಪೊಲೀಸರು ಸ್ವೀಕರಿಸಿದ್ದಾರೆ.

ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಶನಿವಾರ ಸಂಜೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ. ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.

10 ದಿನಗಳಲ್ಲಿ ಯೋಗಿ ಆದಿತ್ಯನಾಥ್​ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ ​ಅವರನ್ನು ಕೊಂದ ರೀತಿಯಲ್ಲೇ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಅಕ್ಟೋಬರ್ 12 ರಂದು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬಾಬಾ ಸಿದ್ದಿಕ್ ಅವರನ್ನು ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಬಾಬಾ ಸಿದ್ದಿಕ್​ ಅವರು ಬಾಲಿವುಡ್​ ನಟ ಸಲ್ಮಾನ್​ ಖಾನ್​ರೊಂದಿಗೆ ನಿಕಟ ಸಂಬಂಧ ಹೊಂದಿದ್ದಕ್ಕೆ ಕೊಂದಿದ್ದಾಗಿ ಕುಖ್ಯಾತ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಒಪ್ಪಿಕೊಂಡಿತ್ತು.

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಸಲ್ಮಾನ್​ ಖಾನ್​ಗೂ ಬೆದರಿಕೆ ಸಂದೇಶ ಬಂದಿತು. ಬೆದರಿಕೆ ಹಾಕಿದ ವ್ಯಕ್ತಿಯನ್ನು ಬುಧವಾರ ಬಂಧಿಸಿದ ಕೆಲವೇ ದಿನಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್​ಗೆ ಬೆದರಿಕೆ ಕರೆ ಬಂದಿದೆ. ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈನ ಬಾಂದ್ರಾ ಪೂರ್ವದ ಅಜಮ್ ಮೊಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ