ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ.
ಮೊನ್ನೆ ಬಜೆಟ್ ಸೆಷನ್ ಗೆ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ ಭವನದಲ್ಲಿ ಭಾಷಣ ಮಾಡಿದ್ದರು. ಈ ಭಾಷಣದ ಬಗ್ಗೆ ಕಾಮೆಂಟ್ ಮಾಡಿದ್ದ ಸೋನಿಯಾ ರಾಷ್ಟ್ರಪತಿಗಳಿಗೆ ಸುಸ್ತಾಗಿರಬೇಕು, ಪೂರ್ ಲೇಡಿ ಎಂದು ಹಗುರ ಮಾತುಗಳನ್ನಾಡಿದ್ದರು.
ಅವರ ಮಾತು ವಿವಾದಕ್ಕೀಡಾಗಿದ್ದು, ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ್ದಾಗಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷ ಮತ್ತು ಪ್ರಿಯಾಂಕ ಗಾಂಧಿ ಸ್ಪಷ್ಟನೆ ನೀಡಿದ್ದರು. ನನ್ನ ತಾಯಿಗೂ ವಯಸ್ಸಾಗಿದೆ, ಏನೋ ರಾಷ್ಟ್ರಪತಿಗಳ ವಯಸ್ಸಿನ ಕಾರಣಕ್ಕೆ ಸುಸ್ತಾಗಿರಬಹುದು ಎಂದಿರಬಹುದು ಎಂದು ತೇಪೆ ಹಾಕುವ ಯತ್ನ ಮಾಡಿದ್ದರು.
ಆದರೆ ಈ ವಿವಾದ ಇಲ್ಲಿಗೇ ನಿಂತಿಲ್ಲ. ಇದೀಗ ಬಿಹಾರದ ವಕೀಲ ಸುಧೀರ್ ಓಝಾ ಎಂಬವರು ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಅವಮಾನ ಮಾಡಿದ ಸೋನಿಯಾ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.