ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮೊದಲು ಪ್ರಧಾನಿ ಮೋದಿ 11 ದಿನ ಉಪವಾಸ ವ್ರತ ಕೈಗೊಂಡಿದ್ದು ಭಾರೀ ಸುದ್ದಿಯಾಗಿದೆ.
ಪ್ರಾಣ ಪ್ರತಿಷ್ಠೆ ಬಳಿಕ ಮೋದಿ ಉಪವಾಸ ಅಂತ್ಯವಾಗಿತ್ತು. ಈ 11 ದಿನ ಮೋದಿ ಕೇವಲ ಎಳೆನೀರು ಮಾತ್ರ ಸೇವನೆ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಇದೆಲ್ಲಾ ಸುಳ್ಳು ಎಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಮೋದಿ 11 ದಿನ ಉಪವಾಸ ಮಾಡಿದ್ದು ಸುಳ್ಳು. 11 ದಿನ ಉಪವಾಸ ಮಾಡಿದರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ವೈದ್ಯರೇ ಹೇಳಿದ್ದಾರೆ. ಆದ್ದರಿಂದ ಮೋದಿ ಉಪವಾಸ ಮಾಡಿಲ್ಲ. ಮೋದಿಯನ್ನು ಗರ್ಭಗುಡಿ ಒಳಗೆ ಬಿಡಬಾರದಿತ್ತು. ರಾಜಧರ್ಮ ಪರಿಪಾಲನೆ ಮಾಡದ ಅವರಿಂದ ದೇವಾಲಯದ ಪಾವಿತ್ರ್ಯತೆ ಹೇಗೆ ಬರಲಿದೆ? ಎಂದು ಹೇಳುವ ಮೂಲಕ ಮೊಯ್ಲಿ ವಿವಾದ ಹುಟ್ಟುಹಾಕಿದ್ದಾರೆ.
ಅವರ ಈ ಹೇಳಿಕೆ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ವಿಪಕ್ಷ ನಾಯಕ ಆರ್. ಅಶೋಕ್ ಪ್ರಧಾನಿ ಒಬಿಸಿಗೆ ಸೇರಿದವರು ಎಂಬ ಕಾರಣಕ್ಕೆ ಈ ನಿಂದನೆ ಮಾಡುತ್ತಿದ್ದೀರಾ? ಇದೇನಾ ನಿಮ್ಮ ಜಾತ್ಯಾತೀತತೆ? ತಕ್ಷಣವೇ ಮೊಯ್ಲಿಯವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೊದಲೇ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ನಡುವೆ ಇಂತಹದ್ದೊಂದು ಹೇಳಿಕೆ ಪಕ್ಷವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.