ಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ
ಶನಿವಾರ, 21 ಆಗಸ್ಟ್ 2021 (14:02 IST)
ನವದೆಹಲಿ, ಆಗಸ್ಟ್ 21: ಜಗತ್ತಿನಲ್ಲೇ ಮೊದಲ ಹಾಗೂ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡಿಎನ್ಎ ಆಧಾರಿತ ಕೊವಿಡ್-19 ಲಸಿಕೆಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅನುಮೋದನೆ ನೀಡಿದೆ.
"ಜೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಜೈಕೊವ್-ಡಿ ಲಸಿಕೆಯ ತುರ್ತು ಬಳಕೆಗೆ ಶುಕ್ರವಾರ ಅನುಮೋದನೆ ನೀಡಲಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳು ಮತ್ತು ವಯಸ್ಕರಿಗೆ ಈ ಲಸಿಕೆ ನೀಡುವುದಕ್ಕೆ ಅನುಮತಿಸಲಾಗಿದೆ," ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ಜೈಡಸ್ ಕ್ಯಾಡಿಲಾ ಕಂಪನಿ 3 ಡೋಸ್ ಕೊವಿಡ್-19 ಲಸಿಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಔಷಧ ನಿಯಂತ್ರಕರ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿತ್ತು. ಜೈಡಸ್ ತನ್ನ ಎರಡು ಡೋಸ್ ಲಸಿಕೆಯ ಕಟ್ಟುಪಾಡುಗಳ ಕುರಿತು ಹೆಚ್ಚುವರಿ ದತ್ತಾಂಶವನ್ನು ಸಲ್ಲಿಸುವಂತೆ ಸಮಿತಿ ಸೂಚಿಸಿತ್ತು. ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿ ಉತ್ಪಾದಿಸುವ ಕೊರೊನಾವೈರಸ್ ಸೋಂಕಿನ ಜೈಕೊವ್-ಡಿ ಲಸಿಕೆಯ ಪರಿಣಾಮಕಾರಿತ್ವದ ಪ್ರಮಾಣವು ಶೇ.66.60ರಷ್ಟಿದ್ದು, ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೋರಿ ಕಳೆದ ಜುಲೈ 1ರಂದೇ ಅರ್ಜಿಯನ್ನು ಸಲ್ಲಿಸಲಾಗಿತ್ತು. ಕೊವಿಡ್-19 ಲಸಿಕೆ ಸುರಕ್ಷತೆ ಮತ್ತು ಪರಿಣಾಮ:
ಭಾರತದಲ್ಲಿ ಜೈಡಸ್ ಕ್ಯಾಡಿಲಾ ಕಂಪನಿಯು ಸಂಶೋಧಿಸಿರುವ ಜೈಕೊವ್-ಡಿ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗಿತ್ತು. ದೇಶಾದ್ಯಂತ 28,000 ಜನರನ್ನು ಬಳಸಿಕೊಂಡು ಈಗಾಗಲೇ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. 12 ರಿಂದ 18 ವರ್ಷದ 1,000 ಮಕ್ಕಳನ್ನು ಲಸಿಕೆ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದ್ದು, ಜೈಕೊವ್-ಡಿ ಲಸಿಕೆಯು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಅನುಮೋದನೆ ಸಿಕ್ಕ ಎರಡು ತಿಂಗಳಿನಲ್ಲಿ ಜೈಕೊವ್-ಡಿ ಲಸಿಕೆ:
ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧಿಸಿರುವ ಜೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಜೈಕೊವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಎರಡು ತಿಂಗಳಿನಲ್ಲಿ ಲಸಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ. ಜೈಕೊವ್-ಡಿ ಲಸಿಕೆಯನ್ನು 2 ರಿಂದ -8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕು. 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 3 ತಿಂಗಳ ಅವಧಿವರೆಗೂ ಸಂಗ್ರಹಿಸಲು ಸಾಧ್ಯ ಎಂದು ಕಂಪನಿ ಹೇಳಿದೆ.