ದಾದ್ರಿ ಹತ್ಯೆ: ಇಕ್ಲಾಖ್ ಕುಟುಂಬದ ವಿರುದ್ಧ ಕೇಸ್ ದಾಖಲಿಸಲಿರುವ ಆರೋಪಿ ಕುಟುಂಬ
ಬುಧವಾರ, 1 ಜೂನ್ 2016 (18:56 IST)
ದೇಶದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದ ದಾದ್ರಿ ಗೋಹತ್ಯೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು ಮೃತ ಇಖ್ಲಾಕ್ ಮನೆಯಲ್ಲಿದ್ದುದು ಕುರಿಮಾಂಸವಲ್ಲ, ಗೋಮಾಂಸ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿಗಳಲ್ಲೊಬ್ಬನಾದ ವಿಶಾಲ್ ಕುಟುಂಬದವರು ಇಖ್ಲಾಕ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಸುವನ್ನು ಹತ್ಯೆ ಮತ್ತು ಮಾಂಸ ಭಕ್ಷಣೆ ಮಾಡಿದ್ದಕ್ಕೆ ಇಖ್ಲಾಕ್ ಕುಟುಂಬದ ವಿರುದ್ಧ ತಾವು ಪ್ರಕರಣ ದಾಖಲಿಸುತ್ತೇವೆ. ಆರೋಪಿ ವಿಶಾಲ್ ತಂದೆ ಸಂಜಯ್ ರಾಣಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಗೋಮಾಂಸ ಸೇವನೆ ಮಾಡಿದ್ದಕ್ಕೆ ಮತ್ತು ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಇಖ್ಲಾಕ್ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದಾದ್ರಿ ಹತ್ಯೆ ಪ್ರಕರಣದಲ್ಲಿ ನಿಮ್ಮ ಮಗನ ಪಾತ್ರವಿದೆಯೇ ಎಂದು ಕೇಳಲಾಗಿ ಅದನ್ನು ಕೋರ್ಟ್ ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಗೋಮಾಂಸ ಸೇವನೆ ಮಾಡಿದ್ದಾರೆ ಮತ್ತು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಿ ಇಖ್ಲಾಕ್ ಮತ್ತು ಆತನ ಮಗನ ಮೇಲೆ 100 ಜನರ ಗುಂಪೊಂದು ದಾಳಿ ನಡೆಸಿತ್ತು. ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಈ ಘಟನೆಯಲ್ಲಿ ಇಖ್ಲಾಕ್ ಮೃತಪಟ್ಟಿದ್ದು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದ.
ದಾರುಣವಾಗಿ ಹತ್ಯೆಗೀಡಾದ ಮೊಹಮ್ಮದ್ ಇಕ್ಲಾಖ್ ಮನೆಯ ಫ್ರಿಜ್‌ನಲ್ಲಿದುದು ಕುರಿ ಮಾಂಸ ಅಲ್ಲ, ದನ ಅಥವಾ ಕರುವಿನ ಮಾಂಸ ಎಂದು ಮಥುರಾದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಖಚಿತಪಡಿಸಿದೆ.
ಹತ್ಯೆಗೀಡಾದ ಇಕ್ಲಾಖ್ ಮನೆಯ ಫ್ರಿಜ್‌ನಿಂದ ಸಂಗ್ರಹಿಸಲಾಗಿದ್ದ ಮಾಂಸದ ಚೂರುಗಳ ರಾಸಾಯನಿಕ ವಿಶ್ಲೇಷಣೆ ಆಧಾರದ ಮೇಲೆ ವಿಧಿ ವಿಜ್ಞಾನ ಪ್ರಯೋಗಾಲಯ ಅದು ಗೋಮಾಂಸ ಎಂದು ವರದಿ ಮಾಡಿದೆ.
ಈ ವರದಿ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಇರಿಸು ಮುರಿಸು ಉಂಟುಮಾಡುವ ಸಾಧ್ಯತೆಗಳು ದಟ್ಟವಾಗಿದ್ದು, ಮತ್ತೆ ರಾಜಕೀಯ ಕೋಲಾಹಲವನ್ನು ಹುಟ್ಟು ಹಾಕಬಹುದು. ಯುಪಿ ಸರ್ಕಾರದ ಮುಖ್ಯ ಪಶು ಅಧಿಕಾರಿಗಳು ನೀಡಿದ್ದ ವರದಿ ಅದು ಗೋಮಾಂಸವಲ್ಲ ಕುರಿ ಮಾಂಸ ಎಂದು ವರದಿ ನೀಡಿತ್ತು.
ಈ ಪ್ರಕರಣ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಚರ್ಚೆಯನ್ನು ಹುಟ್ಟು ಹಾಕಿತ್ತು. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಘಟನೆಯ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ್ದವು. ಘಟನೆಯನ್ನು ವಿರೋಧಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಹಲವು ಸಾಹಿತಿಗಳು, ವಿಜ್ಞಾನಿಗಳು ತಮ್ಮ ಪ್ರಶಸ್ತಿ ವಾಪಸ್ಸಾತಿ ಮಾಡುವ ಮೂಲಕ ಪ್ರತಿಭಟಿಸಿದ್ದರು.
ಎಐಎಮ್ಐಎಮ್ ವರಿಷ್ಠ ಅಸಾದುದ್ದೀನ್ ಓವೈಸಿ, ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಕೇಜ್ರಿವಾಲ್ , ಕೇಂದ್ರ ಸಚಿವ ಮಹೇಶ್ ಶರ್ಮಾ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪೀಡಿತನ ಮನೆಗೆ ಭೇಟಿ ನೀಡಿದ್ದರು. ಇಕ್ಲಾಖ್ ಕುಟುಂಬಕ್ಕೆ ಅಖಿಲೇಶ್ ಸರ್ಕಾರ 45 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಜತೆಗೆ ನಾಲ್ಕು ನಿವೇಶನಗಳನ್ನು ನೀಡಿತ್ತು.
ಪೊಲೀಸರು ಇಕ್ಲಾಖ್ ಅವರ ಮನೆಯಲ್ಲಿ ದೊರೆತಿದ್ದ ಮಾಂಸದ ತುಂಡನ್ನು ಪರಿಶೀಲನೆಗಾಗಿ ಮಥುರಾದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.
ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳಿಂದ ಗೋ ಹತ್ಯೆಯನ್ನು ನಿಷೇಧಿಸಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.