ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಅತ್ಯಾಚಾರ ತಡೆ ಮಸೂದೆಯನ್ನು ಇಂದು ಮಂಡಿಸಿದೆ. ಆ ಮಸೂದೆಯಲ್ಲಿ ಅತ್ಯಾಚಾರ ತಡೆಗೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಕಾನೂನು ಸಚಿವ ಮೊಲೊಯ್ ಘಾಟಕ್ ಅವರು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿದರು. ಮಸೂದೆಯ ಬಗ್ಗೆ ವಿವಿಧ ಪಕ್ಷಗಳ ಶಾಸಕರಿಂದ ಚರ್ಚೆ ನಡೆಯಲಿದೆ.
ಪ್ರಸ್ತಾವಿತ ಮಸೂದೆ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಮೃತಪಟ್ಟರೆ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶ ಇದೆ. ಅಲ್ಲದೇ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ಅಪರಾಧಿಗಳಿಗೆ ಪೆರೋಲ್ ನೀಡದೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಪ್ರಸ್ತಾವ ಮಸೂದೆಯಲ್ಲಿದೆ.
ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹೊಸ ಶಿಕ್ಷೆಗಳನ್ನು ಇದರಲ್ಲಿ ಪರಿಚಯಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಒತ್ತು ನೀಡುವ ಗುರಿಯನ್ನು ಇದು ಹೊಂದಿದೆ.
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆ ಬಳಿಕ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಪಶ್ಚಿಮ ಬಂಗಾಲ ಸರ್ಕಾರ ಹೊಸ ಮಸೂದೆ ಮಂಡಿಸಿದೆ.