ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ಪರ ಕಾನೂನುಗಳು ದುರ್ಬಳಕೆಯಾಗುತ್ತಿದೆ ಎಂಬ ಆಕ್ರೋಶದ ಮಧ್ಯೆ ದೆಹಲಿ ಹೈಕೋರ್ಟ್ ದುಡ್ಡಿದ್ದರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಗಂಡನ ಬಳಿ ಹಣಕ್ಕಾಗಿ ಬೇಡಿಕೆಯಿಡುವ ಮಹಿಳೆಯರಿಗೆ ತಕ್ಕ ಉತ್ತರ ನೀಡಿದೆ.
ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಪತಿ ಜೀವನಾಂಶ ನೀಡಬೇಕಾಗುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರು ಜೀವನದಲ್ಲಿ ಸಂಕಷ್ಟಕ್ಕೀಡಾಗಬಾರದು ಎಂಬ ಉದ್ದೇಶಕ್ಕೆ ಇಂತಹದ್ದೊಂದು ಕಾನೂನು ಇದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಇದನ್ನು ದುರ್ಬಳಕೆ ಮಾಡಲಾಗುತ್ತದೆ ಎಂಬ ಆರೋಪಗಳಿವೆ.
ಹೀಗಾಗಿ ದೆಹಲಿ ಹೈಕೋರ್ಟ್ ನೀಡಿದ ಈ ತೀರ್ಪು ಗಮನಾರ್ಹವಾಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಮಧ್ಯಂತರವಾಗಿ ಗಂಡನಿಂದ ಜೀವನಾಂಶಕ್ಕೆ ಬೇಡಿಕೆ ಇಡಬಾರದು. ಕೋರ್ಟ್ ಇಂತಹ ವರ್ತನೆಯನ್ನು ಬೆಂಬಲಿಸಲ್ಲ ಎಂದು ಖಡಕ್ ಆಗಿ ಹೇಳಿದೆ.
ಮಹಿಳೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಗಂಡನಿಂದ ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ಇದನ್ನು ಕೆಳಹಂತದ ಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಕೂಡಾ ಕೆಳಹಂತದ ಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.