ನೋಟು ರದ್ದತಿ ಮಾತುಕತೆ 2016 ಜನವರಿಯಲ್ಲೇ ಆರಂಭ

ಗುರುವಾರ, 19 ಜನವರಿ 2017 (13:40 IST)
ನೋಟು ರದ್ದತಿ ಮಾತುಕತೆ ಕಳೆದ ವರ್ಷ ಜನವರಿ ತಿಂಗಳಿಂದಲೇ ಆರಂಭವಾಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ. 

ಬುಧವಾರ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದ ಉರ್ಜಿತ್ ಪಟೇಲ್, ನೋಟು ರದ್ಧತಿ ಮತ್ತು ನಂತರದ ಪರಿಣಾಮ, ಸಾಧಕ- ಬಾಧಕಗಳ ಸಂಪೂರ್ಣ ವಿವರ ನೀಡಿದರು.
 
ದೊಡ್ಡ ಮುಖಬೆಲೆ ನೋಟುಗಳನ್ನು ಅಮಾನ್ಯ ಮಾಡುವ ಬಗ್ಗೆ ಸರ್ಕಾರ ಮತ್ತು ಆರ್‌ಬಿಐ ನಡುವೆ 2016ರ ಆರಂಭದಿಂದಲೇ ಮಾತುಕತೆ ನಡೆದಿತ್ತು. ಈ ನಡೆಯ ಹಿಂದಿನ ಉದ್ದೇಶಕ್ಕೆ ಆರ್‌ಬಿಐ ಸಹಮತ ನೀಡಿತ್ತು ಎಂದಿದ್ದಾರೆ ಪಟೇಲ್.
 
ನೋಟು ರದ್ದತಿ ಬಳಿಕ 9.2 ಲಕ್ಷ ಹೊಸ ನೋಟುಗಳನ್ನು ವ್ಯವಸ್ಥೆಯಲ್ಲಿ ತರಲಾಗಿದೆ ಎಂದ ಪಟೇಲ್ ಬಳಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿ ಬಂದಿರುವ ರದ್ದಾದ ನೋಟುಗಳ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ.
 
8/11 ರ ನಡೆ ಬಳಿಕ ಅಸ್ತವ್ಯಸ್ತವಾಗಿರುವ ಬ್ಯಾಕಿಂಗ್ ವ್ಯವಸ್ಥೆ ಯಾವಾಗ ಸಹಜ ಸ್ಥಿತಿಗೆ ಮರಳಲಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಅವರನ್ನೊಳಗೊಂಡ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಹೇಳಿದ್ದಾರೆ.
 
ನೋಟು ರದ್ದತಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಈ ಕ್ರಮದಿಂದ ದೇಶದ ಆರ್ಥಿಕತೆ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿವರಣೆ ನೀಡಿ ಎಂದು ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಉರ್ಜಿತ್‌ ಪಟೇಲ್ ಅವರಿಗೆ ಸೂಚಿಸಿತ್ತು.
 
ಜನವರಿ 20 ರಂದು ಆರ್‌ಬಿಐ ಗವರ್ನರ್ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಯನ್ನು ಎದುರಿಸಲಿದ್ದಾರೆ. 
 

ವೆಬ್ದುನಿಯಾವನ್ನು ಓದಿ