ಮುಂಬೈ: ಮುಂಬೈನಲ್ಲಿ ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ದೇವೇಂದ್ರ ಫಡಣವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುರುವಾರ ಸಂಜೆ 5.30ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಆಜಾದ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಮೈತ್ರಿಪಕ್ಷವಾದ ಶಿವಸೇನೆ ಪಕ್ಷದ ಏಕನಾಥ ಶಿಂದೆ ಮತ್ತು ಎನ್‌ಸಿಪಿ ಪಕ್ಷದ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ದೇವೇಂದ್ರ ಫಡಣವೀಸ್ ಹೆಸರು ಮುಂಚೂಣಿಯಲ್ಲಿದ್ದ ಕಾರಣ ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಹಾಗೂ ಶಿವಸೇನಾ (ಶಿಂದೆ ಬಣ) ಮುಖ್ಯಸ್ಥ ಏಕನಾಥ ಶಿಂದೆ ಅವರು ನೂತನ ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಸೋಮವಾರ ಮತ್ತು ಮಂಗಳವಾರ ನವದೆಹಲಿಯಲ್ಲಿದ್ದುಕೊಂಡು, ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸಿದ್ದಾರೆ. ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಪಡೆಯಲು ಎನ್‌ಸಿಪಿ ಮತ್ತು ಶಿವಸೇನಾ ತೀವ್ರ ಕಸರತ್ತು ನಡೆಸಿವೆ.