ಹಿಮಪಾತಕ್ಕೆ ಬಿದ್ದ ಯಜಮಾನನಿಗೆ ಕಾವಲಾಗಿ ಎರಡು ದಿನ ನಿಂತ ನಾಯಿ!

Krishnaveni K

ಗುರುವಾರ, 8 ಫೆಬ್ರವರಿ 2024 (16:46 IST)
ನವದೆಹಲಿ: ನಾಯಿ ಎಂದರೆ ವಿಧೇಯತೆಗೆ ಇನ್ನೊಂದು ಹೆಸರು. ಅದನ್ನು ಈ ನಾಯಿ ನಿಜ ಮಾಡಿದೆ. ಜರ್ಮನ್ ಶೆಫರ್ಡ್  ವರ್ಗಕ್ಕೆ ಸೇರಿದ ಈ ನಾಯಿ ಹಿಮಪಾತಕ್ಕೆ ಬಿದ್ದು ಸಾವನ್ನಪ್ಪಿದ ತನ್ನ ಯಜಮಾನ ಮತ್ತು ಆತನ ಸ್ನೇಹಿತನನ್ನು 48 ಗಂಟೆಗಳ ಕಾಲ ಕಾದಿದೆ.

ಮಹಾರಾಷ್ಟ್ರ ಮೂಲದವರಾದ ಅಭಿನಂದನ್ ಗುಪ್ತ ಮತ್ತು ಅವರ ಸ್ನೇಹಿತೆ ಪರ್ಣಿತಾ ಬಾಳಾ ಸಾಹೇಬ್ ಬೇಸ್ ಕ್ಯಾಂಪ್ ಗೆ ಮರಳುವಾಗ ಕಾಂಗ್ರಾದ ಬಿರ್-ಬಿಲ್ಲಿಂಗ್ ಪರ್ವತದಲ್ಲಿ ಸುಮಾರು 900 ಅಡಿ ಆಳದ ಹಿಮ ಪ್ರಪಾತಕ್ಕೆ ಬಿದ್ದಿದ್ದರು. ಅವರ ಜೊತೆ ನಾಯಿಯೂ ಇತ್ತು.

ಮೇಲೆ ಬರಲು ಪ್ರಯತ್ನಿಸಿದರೂ ಅಭಿನಂದನ್ ಮತ್ತು ಸ್ನೇಹಿತೆಗೆ ಮೇಲೆ ಬರಲು ಸಾಧ‍್ಯವಾಗಲಿಲ್ಲ. ತೀವ್ರ ಗಾಯಗೊಂಡಿದ್ದ ಇಬ್ಬರೂ ಸಾವನ್ನಪ್ಪಿದ್ದರು. ಆದರೆ ನಾಯಿ ಮಾತ್ರ ತನ್ನ ಯಜಮಾನನ್ನು ಬಿಟ್ಟುಬಿಡದೇ ರಕ್ಷಣಾ ಸಿಬ್ಬಂದಿ ಬರುವವರೆಗೂ ಅಲ್ಲಿಯೇ 48 ಗಂಟೆಗಳ ಕಾಲ ಕಳೆದಿತ್ತು. ಅಂತಹ ಚಳಿಯಲ್ಲೂ ಆಹಾರವಿಲ್ಲದೇ ಅಲ್ಲಾಡದೇ ಯಜಮಾನನಿಗಾಗಿ ನಾಯಿ ಕಾದು ಕುಳಿತಿದ್ದು ಅಚ್ಚರಿಯೇ ಸರಿ. ಬಳಿಕ ರಕ್ಷಣಾ ಸಿಬ್ಬಂದಿಗೆ ತನ್ನ ಯಜಮಾನನ ಇರುವಿಕೆ ತಿಳಿಸಿದ್ದೂ ನಾಯಿಯೇ. ರಕ್ಷಣಾ ಸಿಬ್ಬಂದಿಯನ್ನೇ ಹಿಂಬಾಲಿಸಿದ ನಾಯಿ ಯಜಮಾನನ ಮೃತದೇಹ ಹೊರತರುವವರೆಗೂ ಜೊತೆಗೇ ಸಾಥ್ ಕೊಟ್ಟಿತ್ತು.

ಬಳಿಕ ಅಭಿನಂದನ್ ಕುಟುಂಬಸ್ಥರು ಮೃತದೇಹಗಳ ಜೊತೆ ನಾಯಿಯನ್ನೂ ತಮ್ಮ ಜೊತೆಗೆ ಕರೆದೊಯ್ದಿದ್ದಾರೆ. ಈ ನಾಯಿಯ ಸಾಹಸಗಾಥೆಗೆ ರಕ್ಷಣಾ ಸಿಬ್ಬಂದಿ ಸಲಾಂ ಹೊಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ